ಭಾವಿಸಿರುವುದಕ್ಕಿಂತಲೂ ಹೆಚ್ಚು ವೇಗವಾಗಿ ಕರಗುತ್ತಿರುವ ಆರ್ಕ್‌ಟಿಕ್ ಸಮುದ್ರ
ಕೋಪನ್‌ಹೇಗನ್ (ಡೆನ್ಮಾರ್ಕ್), ಆ. 19: ಪರಿಸರ ಮಾದರಿಗಳು ಊಹಿಸಿರುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಆರ್ಕ್‌ಟಿಕ್ ಸಮುದ್ರದ ಮಂಜು ಕರಗುತ್ತಿದೆ ಎಂದು ಡೆನ್ಮಾರ್ಕ್‌ನ ಕೋಪನ್‌ಹ್ಯಾಗನ್ ವಿಶ್ವವಿದ್ಯಾನಿಲಯದ ಸಂಶೋಧಕರು ಮಂಗಳವಾರ ಎಚ್ಚರಿಸಿದ್ದಾರೆ.
ಈವರೆಗಿನ ಪರಿಸರ ಮಾದರಿಗಳು, ಆರ್ಕ್‌ಟಿಕ್ ಸಮುದ್ರದ ಉಷ್ಣತೆಯು ನಿಧಾನವಾಗಿ ಮತ್ತು ಸ್ಥಿರವಾಗಿ ಏರುತ್ತಿದೆ ಎಂದು ಹೇಳುತ್ತಾ ಬಂದಿವೆ. ಆದರೆ, ಈ ಸಮುದ್ರದ ಉಷ್ಣತೆಯು ಹೆಚ್ಚು ವೇಗವಾಗಿ ಏರುತ್ತಿದೆ ಎನ್ನುವುದನ್ನು ನೂತನ ಅಧ್ಯಯನವೊಂದು ತಿಳಿಸಿದೆ.
‘‘ಸಮುದ್ರ ಮಟ್ಟಕ್ಕೆ ಅತಿ ಸಮೀಪದಲ್ಲಿರುವ ವಾತಾವರಣದ ಉಷ್ಣತೆಯ ಏರಿಕೆಯ ದರವನ್ನು ನಾವು ಕೀಳಂದಾಜಿಸುತ್ತಾ ಬಂದಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ಸಮುದ್ರದ ಮಂಜುಗಡ್ಡೆಯು ನಾವು ನಿರೀಕ್ಷಿಸಿರುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಮಾಯವಾಗಿದೆ’’ ಎಂದು ಕೋಪನ್‌ಹೇಗನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಹಾಗೂ ಈ ಅಧ್ಯಯನದಲ್ಲಿ ಪಾಲ್ಗೊಂಡ ಸಂಶೋಧಕರ ಪೈಕಿ ಒಬ್ಬರಾಗಿರುವ ಜೆನ್ಸ್ ಹೆಸಲ್‌ಬರ್ಗ್ ಕ್ರಿಸ್ಟನ್‌ಸನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.





