ರಾಜಧಾನಿಯಲ್ಲಿ 2,804 ಮಂದಿಗೆ ಕೊರೋನ ಸೋಂಕು ದೃಢ
ಸೋಂಕಿಗೆ 56 ಮಂದಿ ಮೃತ್ಯು
ಬೆಂಗಳೂರು, ಆ.19: ನಗರದಲ್ಲಿ ಬುಧವಾರ ಒಂದೆ ದಿನ 2,804 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 56 ಜನರು ಮೃತರಾಗಿದ್ದಾರೆ.
ನಗರದಲ್ಲಿ ಒಟ್ಟು 96,910 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,588 ಜನರು ಸೋಂಕಿಗೆ ಬಲಿಯಾಗಿದ್ದಾರೆ. 62,041 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬುಧವಾರ 2,549 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,280 ಜನ ಸಕ್ರೀಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 1,21,733 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಮಂಗಳವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 14,480 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 34,860 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.
ಪ್ಲಾಸ್ಮಾ ದಾನ ಮಾಡಿದ ಶಾಸಕ
ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಕೊರೋನದಿಂದ ಗುಣಮುಖರಾಗುತ್ತಿದ್ದಂತೆ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ. ಇತ್ತೀಚೆಗಷ್ಟೇ ಶಾಸಕ ಡಾ. ರಂಗನಾಥ್ ಅವರು ಕೊರೋನದಿಂದ ಚೇತರಿಸಿಕೊಂಡಿದ್ದರು. ಚೇತರಿಸಿಕೊಂಡ ನಂತರ ತಮ್ಮ ಸಹೋದರ ಡಾ. ರಾಮಚಂದ್ರ ಪ್ರಭು ಜೊತೆ ಸೇರಿ ಕೊರೋನ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈಗ ಡಾ. ರಂಗನಾಥ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ. ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಡಾ. ರಂಗನಾಥ್ ಪಾತ್ರರಾಗಿದ್ದಾರೆ.
10 ಮಂದಿ ಜಾಕಿಗಳಿಗೆ ಕೊರೋನ
ನಗರದ ಹತ್ತು ಮಂದಿ ಕುದುರೆ ಜಾಕಿಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ರೇಸಿಂಗ್ ಸೀಸನ್ ಆರಂಭಕ್ಕೆ ತಯಾರಿಗಳು ನಡೆಯುತ್ತಿದ್ದು, ರೇಸ್‍ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಟಿಸಿಯ ಟ್ರ್ಯಾಕ್‍ನಲ್ಲಿ ತರಬೇತಿ ನಡೆಸಲು ಬೆಂಗಳೂರು ಮೂಲದ 55 ಜಾಕಿಗಳು ಮುಂದಾಗಿದ್ದರು. ಹೀಗಾಗಿ ಕೊರೋನ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣಪತ್ರ ಸಲ್ಲಿಸುವಂತೆ ಕ್ಲಬ್ ಅಧಿಕಾರಿಗಳು ಸೂಚಿಸಿದ್ದರು. ಈಗ 10 ಮಂದಿ ಜಾಕಿಗಳಿಗೆ ಕೊರೋನ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಉದ್ಯೋಗಿಗಳಿಗೆ ಕ್ಲಬ್ ಖಾಲಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕಿಮ್ಸ್ ಆಡಳಿತಾಧಿಕಾರಿ ಅಮಾನತು
ಕಿಮ್ಸ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿನೋದ್ ಅವರನ್ನು ಅಮಾನತು ಮಾಡಿ, ನೂತನ ಆಡಳಿತಾಧಿಕಾರಿಯಾಗಿ ಡಾ.ಮುರಳಿ ಅವರನ್ನ ನೇಮಕ ಒಕ್ಕಲಿಗರ ಸಂಘ ನೇಮಕ ಮಾಡಿದೆ. ಇತ್ತೀಚೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಉಂಟಾದ ಆಕ್ಸಿಜನ್ ಕೊರತೆ ಹಿನ್ನೆಲೆ 350 ರೋಗಿಗಳು ಪರದಾಟ ನಡೆಸಿದರು. ಅಲ್ಲದೇ ತೀರಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನ ನಗರದಲ್ಲಿರುವ ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಯಿತು. ಜೊತೆಗೆ ಡಾ.ವಿನೋದ್ ವಿರುದ್ಧ ವೈದ್ಯರನ್ನ ಮತ್ತು ಸಿಬ್ಬಂದಿಯನ್ನು ಕೀಳಾಗಿ ನಡೆಸಿಕೊಂಡ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಅವರನ್ನ ಆ ಹುದ್ದೆಯಿಂದ ಇಳಿಸಲಾಗಿದೆ ಎನ್ನಲಾಗುತ್ತಿದೆ.







