ಜನರ ಬದುಕು ಬೀದಿಗೆ ಬಿದ್ದರೂ ಕೊಳ್ಳೆ ಹೊಡೆಯುವುದನ್ನು ನಿಲ್ಲಿಸದ ಸರಕಾರ: ಪೃಥ್ವಿರೆಡ್ಡಿ ಆಕ್ರೋಶ
`ಎಲ್ಲಿ 5 ಸಾವಿರ ರೂ.' ಸರಕಾರದ ವಿರುದ್ಧ ಚಾಲಕರ ಹೋರಾಟ
ಬೆಂಗಳೂರು, ಆ. 19: `ಲಾಕ್‍ಡೌನ್ ಸಂದರ್ಭದಲ್ಲಿ 5 ಸಾವಿರ ರೂ.ನೀಡುವುದಾಗಿ ಘೋಷಿಸಿದ್ದ ಸರಕಾರ ಕೊಟ್ಟ ಮಾತು ತಪ್ಪಿದೆ. ಇನ್ನು 15 ದಿನದ ಒಳಗೆ ಹಣವನ್ನು ರಿಕ್ಷಾ, ಟ್ಯಾಕ್ಸಿ ಚಾಲಕರ ಖಾತೆಗೆ ಹಣ ಹಾಕದಿದ್ದರೆ ಪ್ರತಿ ಸಂಸದರ ಹಾಗೂ ಶಾಸಕರ, ಸಚಿವರುಗಳ ಮನೆ ಮುಂದೆ `5 ಸಾವಿರ ಕೊಡಿ' ಎನ್ನುವ ಅಭಿಯಾನ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಇಲ್ಲಿನ ಮೌರ್ಯ ವೃತ್ತದಲ್ಲಿ `ಎಲ್ಲಿ 5 ಸಾವಿರ ರೂ.' ಲಾಕ್‍ಡೌನ್ ವೇಳೆ ಸರಕಾರ ಘೋಷಿಸಿದ್ದ ಹಣ ಬಿಡುಗಡೆಗೆ ಆಗ್ರಹಿಸಿ ರಿಕ್ಷಾ, ಟ್ಯಾಕ್ಸಿ ಚಾಲಕರ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, `ಮಿಶ್ರತಳಿ ಬಿಜೆಪಿ ಸರಕಾರ ಸರಣಿ ಭ್ರಷ್ಟಾಚಾರದ ಮೂಲಕ ಕರ್ನಾಟಕದ ಜನರ ವಿಶ್ವಾಸವನ್ನೇ ಕಳೆದುಕೊಂಡಿದೆ. ಮೂರು ಪಕ್ಷಗಳು ಕರ್ನಾಟಕವನ್ನು ಕೊಳ್ಳೆ ಹೊಡೆದಿವೆ.
ಕೊರೋನ ನೆಪದಲ್ಲಿ ರಾಜ್ಯ ಸರಕಾರ ಲೂಟಿ ಹೊಡೆದಿದೆ, ಇದನ್ನು ಪ್ರಶ್ನಿಸಬೇಕಾಗಿದ್ದ ವಿರೋಧ ಪಕ್ಷಗಳು ಸರಕಾರದ ಜತೆ ಶಾಮೀಲಾಗಿ ಒಂದೂ ಮಾತನ್ನೂ ಆಡದೆ ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಪ್ರಮುಖ ಮೂರು ಪಕ್ಷಗಳು ಅಧಿಕಾರದ ರುಚಿಯನ್ನು ಅನುಭವಿಸಿವೆ, ಇದು ಒಳ ಒಪ್ಪಂದ ಅಲ್ಲದೇ ಮತ್ತೇನು ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ರಾಜ್ಯದ ಎಲ್ಲ ಆಟೋ ಸಂಘಟನೆಗಳು ಇಂದು ಒಂದೇ ವೇದಿಕೆಯಲ್ಲಿ ಬಂದಿವೆ. ಇದು ರಾಜ್ಯ ಇತಿಹಾಸದಲ್ಲಿ ಮೊದಲು. ಇಲ್ಲಿ ಯಾವುದೇ ರಾಜಕೀಯವಿಲ್ಲ. ನಮಗೆಲ್ಲರಿಗೂ ಇರುವುದು ಒಂದೇ ಉದ್ದೇಶ. `ಚಾಲಕರ ಜೀವನ ಮಟ್ಟ ಸುಧಾರಿಸಬೇಕು' ಎನ್ನುವುದು ನಮ್ಮ ಉದ್ದೇಶವಾಗಿರುವುದರಿಂದ ಇಂದು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿದ್ದೇವೆ. ಮುಂದೆ ಒಂದಾಗಿಯೇ ಇರುತ್ತೇವೆ ಎಂದು ಅವರು ಹೇಳಿದರು.
ಸರಕಾರದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುವ ಕುಂಟು ನೆಪ ಮಾಡಿಕೊಂಡು ಚಾಲಕರ ಹೊಟ್ಟೆ ಮೇಲೆ ಸರಕಾರ ಹೊಡೆಯುತ್ತಿದೆ. ಆದರೆ, ಪ್ರಭಾವಿ ಶಾಸಕರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂ.ಕೊಡುಗೆ ನೀಡುತ್ತಿದ್ದಾರೆ. ಇದಕ್ಕೆ ಎಲ್ಲಿಂದ ಹಣ ಬರುತ್ತಿದೆ. ಈ ಪ್ರಶ್ನೆಗೆ ಉತ್ತರಿಸುವಿರಾ? ಯಡಿಯೂರಪ್ಪ ಅವರೇ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಪ್ರಶ್ನಿಸಿದರು.
ಪ್ರತಿಭಟನೆ ನಂತರ ಸುಮಾರು 413 ಆಟೋಗಳನ್ನು ಸ್ಯಾನಿಟೈಜ್ ಮಾಡಲಾಯಿತು. ಪ್ರತಿಭಟನೆಗೆ ಬಂದಿದ್ದ ಆಟೋ ಚಾಲಕರ ದೇಹದ ಉಷ್ಣತೆ, ಪಲ್ಸ್ ಆಕ್ಸಿ ಮೀಟರ್ ಮೂಲಕ ಆಮ್ಲಜನಕ ಮಟ್ಟ ಪರೀಕ್ಷಿಸಲಾಯಿತು. ಆಟೋ ಘಟಕದ ಅಧ್ಯಕ್ಷ ಅಯೂಬ್ ಖಾನ್, ಉಪಾಧ್ಯಕ್ಷ ವೆಂಕಟೇಗೌಡ, ಪೀಸ್ ಆಟೋ ಡ್ರೈವರ್ ಸಂಘಟನೆ ರಘು ನಾರಾಯಣಗೌಡ, ಆದರ್ಶ ಆಟೋ ಸಂಘಟನೆ ಡಾ.ಸಂಪತ್, ಆಟೋ ಮಿತ್ರ ಪತ್ರಿಕೆ ಜಯರಾಂ, ರಾಜೀವ್ ಗಾಂಧಿ ಆಟೋ ಸಂಘಟನೆ ಚಂದ್ರಶೇಖರ್, ಜಯಕರ್ನಾಟಕ ಸಂಘಟನೆ ಆನಂದ್, ಕರವೇ ಆಟೋ ಚಾಲಕರ ಸಂಘದ ಗಂಧರ್ವ ರಮೇಶ್, ವಿವಿಧ ಆಟೋ ಚಾಲಕರ ಸಂಘಗಳ ಮುಖಂಡ ರಾಮಕೃಷ್ಣ, ಸಿ.ಟಿ.ಲೋಕೇಶ್, ನವೀದ್, ಕೆ.ಕೆ.ಚಿಕ್ಕೇಗೌಡ, ಎಜೆ.ಖಾನ್, ಫೈರೋಜ್ ಪಾಲ್ಗೊಂಡಿದ್ದರು.







