ನೀರಿನ ಸದ್ಬಳಕೆ ಕುರಿತ ಜನ ಜಾಗೃತಿಗೆ 'ಜಲಾಮೃತ': ಸಚಿವ ಕೆ.ಎಸ್. ಈಶ್ವರಪ್ಪ
`ಜಲಾಮೃತ' ಕೈಪಿಡಿ ಬಿಡುಗಡೆ

ಬೆಂಗಳೂರು, ಆ. 19: ಜಲ ಸಂರಕ್ಷಣೆ, ನೀರಿನ ಸದ್ಬಳಕೆ, ಹಸರೀಕರಣ ಅನುಷ್ಠಾನಕ್ಕೆ 'ಜಲಾಮೃತ ವಿಶೇಷ ಕೈಪಿಡಿ'ಯನ್ನು ರೂಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ಜಲಾಮೃತ. ನೀರಿನ ಸದ್ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮವನ್ನು ಸರಕಾರ ಜಾರಿಗೆ ತಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ 'ಜಲಾಮೃತ' ಕೈಪಿಡಿ-2020 ಬಿಡುಗಡೆ ಮಾಡಿ ಮಾತನಾಡಿದ ಅವರು, ಅಂತರ್ ಜಲ ಚೇತನ ಮೂಲಕ ನೀರು ತುಂಬಿಸುವ ಕೆಲಸ ಆಗುತ್ತಿದೆ. ಕೆರೆಗಳ ಪುನಶ್ಚೇತನ ಮಾಡುವ ಕೆಲಸ ಸರಕಾರ ಮಾಡುತ್ತಿದೆ. ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಸರಕಾರ ಜಾರಿಗೆ ತರುತ್ತಿದೆ. ಜಲಾಮೃತ ಕೈಪಿಡಿಯ ಪ್ರತಿಗಳನ್ನು ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ಜನರು ಈ ಕೈಪಿಡಿ ಬಳಸಿಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೈಪಿಡಿ ಕಿರು ಪರಿಚಯ: ಜಲ ಸಾಕ್ಷರತೆಯ ಮಹತ್ವ, ಜಲಚಕ್ರ, ಭೂಮಿಯ ಮೇಲೆ ಸಿಗುವಂತಹ ನೀರಿನ ರೂಪಗಳು, ರಾಜ್ಯದಲ್ಲಿ ಮಳೆ ಹಂಚಿಕೆ, ಜಲ ಕ್ಷಮತೆಯಿಂದ ಭಾರತದಲ್ಲಿ ಉಂಟಾದ ಬರಗಾಲದ ಇತಿಹಾಸ, ಬರಗಾಲವನ್ನು ಎದುರಿಸಲು ಮತ್ತು ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸೂಕ್ತ ಕ್ರಮ ಅಳವಡಿಸುವಿಕೆ ಕುರಿತು ಮೊದಲ ಅಧ್ಯಾಯದಲ್ಲಿದೆ ಎಂದು ಈಶ್ವರಪ್ಪ ಇದೇ ವೇಳೆ ವಿವರ ನೀಡಿದರು.
ಎರಡನೆ ಅಧ್ಯಾಯದಲ್ಲಿ ಜಲ ಸಂರಕ್ಷಣೆ ಮತ್ತು ಜಲ ಮೂಲಗಳ ಪುನರುಜ್ಜಿವನ, ಮಣ್ಣು ಮತ್ತು ನೀರಿನ ಸಂರಕ್ಷಣೆ ಕಾಮಗಾರಿಗಳಿಗೆ ಕ್ರಮಗಳು, ನಾಲಾ ಶ್ರೇಣಿಗಳು ಉಪಚಾರ ಮಾಡುವುದು ಹೇಗೆ? ಬರಡು ಮತ್ತು ಬಂಜರು ಭೂಮಿಯನ್ನು ಅಭಿವೃದ್ಧಿ ಪಡಿಸುವ ಕ್ರಮಗಳು, ಮಣ್ಣಿನ ತೇವಾಂಶ ಮತ್ತು ಫಲವತ್ತತೆ ಅಭಿವೃದ್ಧಿ ಪಡಿಸುವುದು. ಮಳೆ ನೀರು ಕೊಯ್ದು, ಜಲ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಕೆರೆಗಳ ಇತಿಹಾಸ ಮತ್ತು ಮಹತ್ವ, ಪ್ರಾಚೀನ ಕಾಲದಲ್ಲಿ ಕೆರೆಯ ನಿರ್ಮಾಣದ ಸಮಗ್ರ ಅಭಿವೃದ್ಧಿಗೆ ಪಾಲಿಸುತ್ತಿದ್ದ 12 ಸೂತ್ರಗಳು, ಪ್ರಾಚೀನ ಕಾಲದಲ್ಲಿ ಕೆರೆ ನಿರ್ಮಾಣ ಸಮಗ್ರ ಅಭಿವೃದ್ಧಿಗೆ ಹನ್ನೆರಡು ಸೂತ್ರಗಳನ್ನು ತೈಲೂರು ವೆಂಕಟಕೃಷ್ಣ ಅವರ `ಪಾರಂಪರಿಕ ಕೆರೆ ಕಟ್ಟೆಗಳು ಅಳಿವು-ಉಳಿವು' ಪುಸ್ತಕದಿಂದ ಆಯ್ದುಕೊಂಡು ಈ ಕೈಪಿಡಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.
ಜಲಾಮೃತ ಹೂಳೆತ್ತುವ ಕಾಮಗಾರಿಗಳ ಅನುಷ್ಠಾನ ಪ್ರಕ್ರಿಯೆ ಪಾಲನೆ, ಜಲಾನಯನ ಅಭಿವೃದ್ಧಿಯ ಮುಖ್ಯ ಉದ್ದೇಶ. ಅಂತರ್ಜಲ ಸಂಪನ್ಮೂಲ ಮತ್ತು ಬಳಕೆ ಪ್ರಮಾಣ ಮತ್ತು ಇತರೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಲಾಗಿದೆ. ನೀರಿನ ಪ್ರಜ್ಞಾವಂತ ಬಳಕೆ, ಜಲವರ್ಷ, ನೀರಿನ ಆಯವ್ಯಯ ಮತ್ತು ಗ್ರಾಮ ಮಟ್ಟದಲ್ಲಿ ಜಲ ಭದ್ರತೆ ಹಾಗೂ ಗುಣಮಟ್ಟವನ್ನು ಕಾಪಾಡಲು ಬೇಕಾದ ಆಯವ್ಯಯ ಅಧ್ಯಯನಗಳನ್ನು ವಿಶ್ಲೇಷಿಸಲಾಗಿದೆ. ಜಲ ಸಂರಕ್ಷಣೆಯಲ್ಲಿ ಅರಣ್ಯಗಳ ಪಾತ್ರ, ಸಾಮಾಜಿಕ ಮತ್ತು ನೆಡು ತೋಪುಗಳು, ನಗರ ಅರಣ್ಯಗಳು, ಉದ್ಯಾನಗಳ ಅಭಿವೃದ್ಧಿ, ಬುಟ್ಟಿಯಿಂದ ಬೆಟ್ಟಕ್ಕೆ ಪರಿಕಲ್ಪನೆಯನ್ನು ವಿವರಿಸಲಾಗಿದೆ.
ಜಲಾಮೃತ ಮೊಬೈಲ್ ಆ್ಯಪ್‍ನಲ್ಲಿ ಕೆರೆಗಳ, ಮಳೆ ನೀರು ಸಂರಕ್ಷಣಾ ರಚನೆಗಳ ಹಾಗೂ ಹಸಿರೀಕರಣ ಗಿಡ ನೆಡಲು ಗಿಡಗಳ ಬೆಳವಣಿಗೆ ಸಂಕ್ಷಿಪ್ತ ಮಾಹಿತಿಯನ್ನು ಛಾಯಾ ಚಿತ್ರಗಳೊಂದಿಗೆ ಜಿಯೋ ಟ್ಯಾಗ್ ಮಾಡಿದ ವಿವರಗಳನ್ನು ನೋಡಬಹುದು. ಜಲಾಮೃತ ಯೋಜನೆ ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ಒಗ್ಗೂಡಿಸುವಿಕೆಯೊಂದಿಗೆ ಮಾದರಿ ಅಂದಾಜು ವೆಚ್ಚದ ವಿವರಗಳು ಹಾಗೂ ನೀರಿನ ಆಯವ್ಯಯದ ಬೇಡಿಕೆ ಮತ್ತು ಲಭ್ಯತೆಯ ಅಂದಾಜು ವೆಚ್ಚವನ್ನು ಹಳ್ಳಿಗಳಿಂದ ಕ್ರೂಢಿಕರಿಸಿ ನಿಖರವಾಗಿ ಗ್ರಾ.ಪಂ.ಮಟ್ಟದಲ್ಲಿ ಅಂದಾಜು ಮಾಡುವ ಕುರಿತು ಮಾಹಿತಿ ಕೈಪಿಡಿಯಲ್ಲಿವೆ.
ಈ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಹಿರಿಯ ಅಧಿಕಾರಿ ಉಮಾ ಮಹದೇವನ್, ಜಲಾಮೃತ ನಿರ್ದೇಶನಾಲಯದ ನಿಜಲಿಂಗಪ್ಪ, ಆಯುಕ್ತೆ ಪ್ರಿಯಾಂಕ್ ಮೇರಿ ಫ್ರಾನ್ಸಿಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
'ಗ್ರಾಮ ಪಂಚಾಯಿತಿ ಚುನಾವಣೆಗೆ ರಾಜ್ಯ ಸರಕಾರ ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಚುನಾವಣೆ ಆಯೋಗ ಸೂಚನೆ ಕೊಟ್ಟ ಕೂಡಲೇ ಗ್ರಾಮ ಪಂಚಾಯಿಗಳಿಗೆ ಚುನಾವಣೆಗೆ ಸರಕಾರ ಸಿದ್ಧ.'
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ







