ತಮ್ಮ ಹೇಳಿಕೆಯನ್ನು ಮರುಪರಿಶೀಲಿಸಲು ಪ್ರಶಾಂತ್ ಭೂಷಣ್‌ಗೆ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ, ಆ.20: “ನಿಮ್ಮ ಹೇಳಿಕೆಯ ಬಗ್ಗೆ ಮತ್ತೊಮ್ಮೆ ಯೋಚಿಸಿ. ಹೇಳಿಕೆ ಮರುಪರಿಶೀಲನೆಗೆ ನಿಮಗೆ 2 ದಿನದ ಕಾಲಾವಕಾಶ ನೀಡಲಾಗುವುದು” ಎಂದು ಸುಪ್ರೀಂಕೋರ್ಟ್ ಪ್ರಶಾಂತ್ ಭೂಷಣ್‌ಗೆ ತಿಳಿಸಿದೆ.
‘ಈ ಜಗತ್ತಿನಲ್ಲಿ ತಪ್ಪು ಮಾಡದ ವ್ಯಕ್ತಿಗಳು ಯಾರೂ ಇಲ್ಲ. ನೀವು ನೂರಾರು ಉತ್ತಮ ಕಾರ್ಯಗಳನ್ನು ಮಾಡಿರಬಹುದು, ಆದರೆ ಇದು ನಿಮಗೆ 10 ಅಪರಾಧ ಎಸಗಲು ಲೈಸೆನ್ಸ್ ನೀಡುವುದಿಲ್ಲ. ಈಗ ಆದದ್ದು ಆಗಿ ಹೋಯಿತು. ಆದರೆ ಸಂಬಂಧಪಟ್ಟ ವ್ಯಕ್ತಿಯಲ್ಲಿ ಪಶ್ಚಾತ್ತಾಪದ ಭಾವನೆಯಿರಬೇಕು ಎಂದು ನಾವು ಭಾವಿಸುತ್ತೇವೆ. ನಿಮ್ಮ ಹೇಳಿಕೆಯನ್ನು ಮರುಪರಿಶೀಲಿಸಲು 2 ದಿನದ ಅವಕಾಶ ನೀಡುತ್ತೇವೆ. ಮರುಪರಿಶೀಲಿಸಿದರೆ ಒಳ್ಳೆಯದು’ ಎಂದು ನ್ಯಾಯಾಧೀಶ ಅರುಣ್ ಮಿಶ್ರಾ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಭೂಷಣ್, “ನ್ಯಾಯಾಲಯ ಬಯಸಿದರೆ ನನ್ನ ಹೇಳಿಕೆಯನ್ನು ಮರುಪರಿಶೀಲಿಸಲು ಸಿದ್ಧ. ಆದರೆ ಆಗಲೂ ಗಮನಾರ್ಹ ಬದಲಾವಣೆಯಿರದು. ಘನವೆತ್ತ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ನನ್ನ ವಕೀಲರೊಂದಿಗೆ ಸಮಾಲೋಚಿಸುತ್ತೇನೆ” ಎಂದರು.
‘ಹೇಳಿಕೆ ಪರಿಶೀಲಿಸುವುದು ಒಳ್ಳೆಯದು. ನಿಮ್ಮ ಕಾನೂನು ಅನುಭವದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಮನಿಸಿ. ಕಳೆದ 24 ವರ್ಷದ ಸೇವಾವಧಿಯಲ್ಲಿ ನ್ಯಾಯಾಂಗ ನಿಂದನೆಯಲ್ಲಿ ದೋಷಿ ಎಂದು ತಾನು ನೀಡಿದ ಮೊದಲ ಪ್ರಕರಣ ಇದಾಗಿದೆ. ಎಲ್ಲದಕ್ಕೂ ಲಕ್ಷ್ಮಣರೇಖೆ ಎಂಬುದಿದೆ. ಅದನ್ನು ಯಾಕೆ ಮೀರಬೇಕು? ಸಾರ್ವಜನಿಕ ಹಿತಾಸಕ್ತಿಯ ನಿಟ್ಟಿನಲ್ಲಿ ಮಾಡಿರುವ ಉತ್ತಮ ಕಾರ್ಯಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ ನೆನಪಿಡಿ, ಇದು ಗಂಭೀರ ಪ್ರಕರಣವಾಗಿದೆ’ ಎಂದು ನ್ಯಾ ಮಿಶ್ರಾ ಹೇಳಿದರು.







