ಯೆಸ್ ಬ್ಯಾಂಕ್ ಹಗರಣ: ವಾಧವಾನ್ ಸೋದರರಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್
ಚಾರ್ಜ್ ಶೀಟ್ ಸಲ್ಲಿಸಲು ಜಾರಿ ನಿರ್ದೇಶನಾಲಯ ವಿಫಲ

ಮುಂಬೈ: ಬಹುಕೋಟಿ ಯೆಸ್ ಬ್ಯಾಂಕ್ ವಂಚನೆ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ ಪ್ರವರ್ತಕರಾದ ಕಪಿಲ್ ವಾಧವಾನ್ ಹಾಗೂ ಧೀರಜ್ ವಾಧವಾನ್ ಅವರಿಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ನೀಡಿದೆ.
ಜಾರಿ ನಿರ್ದೇಶನಾಲಯವು ವಾಧವಾನ್ ಸೋದರರ ವಿರುದ್ಧ ನಿಗದಿತ 60 ದಿನಗಳ ಅವಧಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಸ್ಟಿಸ್ ಭಾರತಿ ಡಾಂಗ್ರೆ ಅವರು ಜಾಮೀನು ಮಂಜೂರುಗೊಳಿಸಿದ್ದಾರೆ. ಇಬ್ಬರೂ ತಲಾ 1 ಲಕ್ಷ ರೂ. ಜಾಮೀನು ಹಣ ಠೇವಣಿ ಇಡಬೇಕು ಹಾಗೂ ತಮ್ಮ ಪಾಸ್ ಪೋರ್ಟ್ ಗಳನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕು ಎಂದು ಜಾಮೀನು ಮಂಜೂರುಗೊಳಿಸುವಾಗ ಷರತ್ತು ವಿಧಿಸಲಾಗಿದೆ.
ಇದೇ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನೂ ವಾಧವಾನ್ ಸೋದರರು ಎದುರಿಸುತ್ತಿರುವುದರಿಂದ ಈಡಿ ಪ್ರಕರಣದಲ್ಲಿ ಜಾಮೀನು ದೊರೆತರೂ ಇಬ್ಬರೂ ಜೈಲಿನಲ್ಲಿಯೇ ಉಳಿಯಬೇಕಾಗುತ್ತದೆ.
ಇಬ್ಬರನ್ನೂ ಜಾರಿ ನಿರ್ದೇಶನಾಲಯ ಮೇ 14ರಂದು ಬಂಧಿಸಿತ್ತು. ನಿರ್ದೇಶನಾಲಯವು ವಾಧವಾನ್ ಸೋದರರು, ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್, ಅವರ ಪತ್ನಿ ಬಿಂದು ಕಪೂರ್, ಪುತ್ರಿಯರಾದ ರೋಶನಿ ಹಾಗೂ ರೇಖಾ ಮತ್ತು ಸಿ ಎ ಸಂಸ್ಥೆ ದುಲರೇಶ್ ಕೆ ಜೈನ್ ಎಂಡ್ ಅಸೋಸಿಯೇಟ್ ವಿರುದ್ಧ ಜುಲೈ 15ರಂದು ಜಾರ್ಜ್ ಶೀಟ್ ಸಲ್ಲಿಸಿತ್ತು.







