ಆಸ್ಪತ್ರೆಯಲ್ಲೇ ನಡೆಯಿತು ಕೊರೋನ ಸೋಂಕಿತನ ವಿವಾಹ: ವಿಡಿಯೋ ವೈರಲ್

ಟೆಕ್ಸಾಸ್: ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ನಡೆಯಲಿದೆ ಎನ್ನುವಾಗ ಕೋವಿಡ್ ಸೋಂಕಿಗೆ ತುತ್ತಾಗಿ ಟೆಕ್ಸಾಸ್ ನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಕಾರ್ಲೋಸ್ ಮುನಿಝ್ ಎಂಬ ವ್ಯಕ್ತಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡೇ ಗ್ರೇಸ್ ಎಂಬ ಯುವತಿಯನ್ನು ವಿವಾಹವಾಗಿದ್ದಾರೆ.
ಆಗಸ್ಟ್ 11ರಂದು ನಡೆದ ಈ ವಿವಾಹ ಸಮಾರಂಭದಲ್ಲಿ ವಧೂ-ವರರ ಕುಟುಂಬ ಸದಸ್ಯರು ಮಾತ್ರ ಹಾಜರಿದ್ದು 41 ವರ್ಷದ ಕಾರ್ಲೋಸ್ ಹಾಗೂ ಗ್ರೇಸ್ ‘ಐ ಡೂ' ಎಂದು ಹೇಳಿ ಸತಿಪತಿಗಳಾದರು.
“ಮದುವೆ ನಡೆಯಬೇಕಿದ್ದ ವಾರದಲ್ಲಿಯೇ ಕಾರ್ಲೋಸ್ ಗೆ ಕೋವಿಡ್ ಸೋಂಕು ತಗಲಿತ್ತಲ್ಲದೆ ಆತನ ಸ್ಥಿತಿ ಗಂಭೀರವಾಗಿ ಕೊನೆಯ ಚಿಕಿತ್ಸೆಯಾಗಿ ಆತನಿಗೆ ಇಸಿಎಂಒ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು'' ಎಂದು ಸ್ಯಾನ್ ಮೆಥಾಡಿಸ್ಟ್ ಆಸ್ಪತ್ರೆ ತನ್ನ ಫೇಸ್ ಬುಕ್ ಪುಟದಲ್ಲಿ ಹೇಳಿಕೊಂಡಿದೆ.
ಆಸ್ಪತ್ರೆಯಲ್ಲಿಯೇ ವಿವಾಹವಾಗುವಂತೆ ಕಾರ್ಲೋಸ್ ಆರೈಕೆ ಮಾಡುತ್ತಿದ್ದ ನರ್ಸ್ ಸಲಹೆ ನೀಡಿದ ನಂತರ ವಿವಾಹ ನಡೆದಿತ್ತು. ಇದೀಗ ಕಾರ್ಲೋಸ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಹಾಗೂ ಈಗ ಕೃತಕ ಉಸಿರಾಟ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.







