ದಕ್ಷಿಣ ರೈಲ್ವೆ ವ್ಯಾಪ್ತಿ ರೋರೋ ಸೇವೆ ವಿಸ್ತರಣೆ
ಮಂಗಳೂರು, ಆ.20: ಕೊಂಕಣ ರೈಲ್ವೆ ಆರಂಭಿಸಿರುವ ರೋರೋ ಸೇವೆಯನ್ನು ಇದೀಗ ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ವಿಸ್ತರಿಸಲು ಚಿಂತನೆ ಆರಂಭವಾಗಿದೆ. ಕುಲಶೇಖರದಿಂದ ಕೋಯಿಕ್ಕೋಡವರೆಗೆ ಬುಧವಾರ ರೋರೋ ಸೇವೆಯನ್ನು ಪ್ರಾಯೋಗಿಕವಾಗಿ ನಡೆಸಲಾಯಿತು.
1999ರಲ್ಲಿ ಕೊಂಕಣ ರೈಲ್ವೆ ನಿಗಮ ಕೊಲಾಡ್ ಮತ್ತು ವರ್ಣಾ ನಡುವೆ ರೋರೋ ಸೇವೆಯನ್ನು ಆರಂಭಿಸಿತ್ತು. 2004 ರಲ್ಲಿ ಈ ಸೇವೆಯನ್ನು ಮಂಗಳೂರಿನ ಸುರತ್ಕಲ್‌ವರೆಗೆ ವಿಸ್ತರಿಸಲಾಗಿತ್ತು. ಬೇಡಿಕೆಗೆ ಅನುಗುಣವಾಗಿ ಸದ್ಯಕ್ಕೆ ನಿತ್ಯ 50 ಟ್ರಕ್‌ಗಳನ್ನು ಹೊಂದಿದ ರೈಲು ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಕೇರಳದವರೆಗೆ ರೋರೋ ಸೇವೆ ವಿಸ್ತರಿಸಲು ಬೇಡಿಕೆ ಬಂದಿದ್ದು, ದಕ್ಷಿಣ ರೈಲ್ವೆ ಸಹಯೋಗದಲ್ಲಿ ಸುರತ್ಕಲ್‌ನಿಂದ ಕೋಯಿಕ್ಕೋಡ್‌ವರೆಗೆ ಪ್ರಾಯೋಗಿಕ ಪರೀಕ್ಷೆಯನ್ನು ಬುಧವಾರ ಆರಂಭಿಸಲಾಯಿತು.
ಒಂದು ಇಂಜಿನ್, ಮೂರು ಬಿಆರ್‌ಎನ್ ಬೋಗಿಗಳು ಹಾಗೂ ಮೂರು ಖಾಲಿ ಟ್ರಕ್‌ಗಳನ್ನು ಹೊತ್ತ ರೋರೋ ಸಂಚಾರ ಬುಧವಾರ ಬೆಳಗ್ಗೆ 8:20ಕ್ಕೆ ಸುರತ್ಕಲ್‌ನಿಂದ ಹೊರಟಿತ್ತು. ಈ ಸಂದರ್ಭದಲ್ಲಿ ಮೂರು ಖಾಲಿ ಟ್ರಕ್‌ಗಳು ಸುರಂಗ ಹಾಗೂ ವಿದ್ಯುತ್ ಮಾರ್ಗಕ್ಕೆ ತಗುಲದಂತೆ ಎಚ್ಚರಿಕೆ ವಹಿಸಲಾಗಿತ್ತು.
ಪ್ರಾಯೋಗಿಕ ರೋರೋ ಸಂಚಾರ ಕೋಯಿಕ್ಕೋಡ್‌ವರೆಗೆ ಯಶಸ್ವಿಯಾಗಿ ನಡೆದಿದೆ. ಕುಲಶೇಖರದ ಸುರಂಗ ಹಾಗೂ ದಕ್ಷಿಣ ರೈಲ್ವೆ ವ್ಯಾಪ್ತಿಯ ವಿದ್ಯುತ್ ಮಾರ್ಗ ಸೇರಿದಂತೆ ಯಾವುದೇ ತೊಂದರೆಗಳು ಎದುರಾಗಲಿಲ್ಲ. ಬುಧವಾರ ಬೆಳಗ್ಗೆ 9:10ಕ್ಕೆ ರೈಲು ಮಂಗಳೂರು ಜಂಕ್ಷನ್ ತಲುಪಿತ್ತು. ನಂತರ 10:30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಕೋಯಿಕ್ಕೋಡ್‌ಗೆ ತೆರಳಿತುಎಂದು ದಕ್ಷಿಣ ರೈಲ್ವೆ ಪಾಲ್ಘಾಟ್ ವಲಯದ ಮಹಾಪ್ರಬಂಧಕ ಪ್ರತಾಪ್‌ಸಿಂಗ್ ಶಮಿ ತಿಳಿಸಿದ್ದಾರೆ.
ಪ್ರಾಯೋಗಿಕ ರೋರೋ ಸಂಚಾರವನ್ನು ತಿರುವನಂತಪುರದವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಶೋರನೂರ್ ಬಳಿ ಇರುವ ರೈಲ್ವೆ ಮೇಲ್ಸೇತುವೆ ಅಡ್ಡಿಯಾಗಬಹುದು ಎಂದು ಆತಂಕವಿದೆ. ಆದರೆ, ದಕ್ಷಿಣ ರೈಲ್ವೆ ಈ ಮೇಲ್ಸೇತುವೆಯ ಕೆಳಗಿನಿಂದ ಸಂಚರಿಸುವ ಪ್ರಯತ್ನ ಮಾಡಲಿದೆ. ಒಂದು ವೇಳೆ ಯಶಸ್ವಿ ಆಗದೇ ಇದ್ದಲ್ಲಿ, ಕೋಯಿಕ್ಕೋಡ್‌ವರೆಗೆ ರೋರೋ ಸೇವೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.







