ದ.ಕ. ಜಿಲ್ಲೆಯಲ್ಲಿ ಹೊಸದಾಗಿ 177 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿಗೆ ಆರು ಮಂದಿ ಬಲಿ

ಸಾಂದರ್ಭಿಕ ಚಿತ್ರ
ಮಂಗಳೂರು, ಆ.20: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಮತ್ತೆ ಆರು ಮಂದಿ ಮೃತಪಟ್ಟಿದ್ದು, ಕೋವಿಡ್ಗೆ ಬಲಿಯಾದವರ ಸಂಖ್ಯೆ 296ಕ್ಕೆ ಏರಿದೆ. ಜಿಲ್ಲೆಯಲ್ಲಿ ಹೊಸದಾಗಿ 177 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಮೃತರ ಪೈಕಿ ಮಂಗಳೂರು ತಾಲೂಕಿನ ಮೂವರು, ಬಂಟ್ವಾಳದ ಓರ್ವ, ಹೊರಜಿಲ್ಲೆಯ ಇಬ್ಬರು ಇದ್ದಾರೆ. ಮೃತಪಟ್ಟ ಎಲ್ಲರಿಗೂ ಕೊರೋನ ಸೋಂಕು ತಗುಲಿತ್ತು. ಅಲ್ಲದೆ, ಅವರು ವಿವಿಧ ರೋಗಗಳಿಂದ ಬಳಲುತ್ತಿದ್ದರು.
ಜಿಲ್ಲೆಯಲ್ಲಿ ಮತ್ತೆ 177 ಮಂದಿಯಲ್ಲಿ ಕೊರೋನ ಇರುವುದು ಖಚಿತವಾಗಿದೆ. ಈ ಪೈಕಿ ಸಾಮಾನ್ಯ ಶೀತ ಲಕ್ಷಣ ಇದ್ದವರ ಸಂಖ್ಯೆಯೇ (88)ಅಧಿಕವಿದೆ. ಸೋಂಕಿತರ ಸಂಪರ್ಕದಲ್ಲಿದ್ದ 29 ಮಂದಿ, ತೀವ್ರ ಉಸಿರಾಟ ತೊಂದರೆ-17, ಸೋಂಕು ನಿಗೂಢ ಪ್ರಕರಣದಲ್ಲಿ 43 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಮಂಗಳೂರು ತಾಲೂಕಿನಲ್ಲೇ ಹೆಚ್ಚು ಸೋಂಕಿತರು (107) ಕಂಡುಬಂದಿದ್ದಾರೆ. ಬಂಟ್ವಾಳ-14, ಪುತ್ತೂರು-16, ಸುಳ್ಯ-12, ಬೆಳ್ತಂಗಡಿ-12, ಹೊರಜಿಲ್ಲೆಯ 16 ಮಂದಿಯ ವರದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9,712ಕ್ಕೆ ಏರಿಕೆಯಾಗಿದೆ.
187 ಮಂದಿ ಗುಣಮುಖ: ಸಂತಸದಾಯಕ ಬೆಳವಣಿಗೆಯಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಗುರುವಾರ ಮತ್ತೆ 187 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ. ಕೋವಿಡ್ ಆರೈಕೆ ಕೇಂದ್ರದಿಂದ ಏಳು, ಆಸ್ಪತ್ರೆಗಳಿಂದ 35, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 145 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ನಿಂದ ಗುಣಮುಖರಾದವರ ಸಂಖ್ಯೆ 7,129ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2,287 ಸಕ್ರಿಯ ಪ್ರಕರಣಗಳಿವೆ.







