ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶುಭಸುದ್ದಿ: ಇನ್ನು ಕನ್ನಡ ಮಾಧ್ಯಮದಲ್ಲೂ ಪಿಸಿಎಂಬಿ ಪಠ್ಯಪುಸ್ತಕ ಲಭ್ಯ

ಸಚಿವ ಸುರೇಶ್ ಕುಮಾರ್
ಬೆಂಗಳೂರು, ಆ.20: ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪದವಿ ಪೂರ್ವ ಶಿಕ್ಷಣದ ವಿಜ್ಞಾನ ವಿಭಾಗದ ಸಿಬಿಎಸ್ಇ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಪಿಯು ಇಲಾಖೆಯ ಸಭಾಂಗಣದಲ್ಲಿ, ದ್ವಿತೀಯ ಪಿಯುಸಿ ತರಗತಿಯ ಪಿಸಿಎಂಬಿ ಪಠ್ಯಗಳ ಕನ್ನಡ ಅವತರಣಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಲಾ ವಿಭಾಗದ ವಿದ್ಯಾರ್ಥಿಗಳು ಮಾತ್ರವೇ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಆದರೆ, ಪಿಸಿಎಂಬಿ ಸಂಯೋಜನೆಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದ ಪುಸ್ತಕಗಳು ಇಲ್ಲದಿದ್ದರಿಂದ ಅವರಿಗೆ ಕಷ್ಟವಾದರೂ ಇಂಗ್ಲಿಷ್ನಲ್ಲೇ ಬರೆಯಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಯನ್ನು ಈಗ ನಿವಾರಿಸಲಾಗಿದೆ ಎಂದು ತಿಳಿಸಿದರು.
ನಾಲ್ಕು ವಿವಿಧ ಸಮಿತಿಗಳ ನೇತೃತ್ವದಲ್ಲಿ ವಿಜ್ಞಾನ ವಿಷಯಗಳನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರಿಸಿ ಪುನರ್ ಪರಿಶೀಲಿಸಿ ಮುದ್ರಣ ಕಾರ್ಯ ಪೂರ್ಣಗೊಳಿಸಲಾಗಿದೆ. ರಾಜ್ಯದ 650 ಸರಕಾರಿ ಪದವಿ ಪೂರ್ವ ಕಾಲೇಜುಗಳ ಗ್ರಂಥಾಲಯಗಳಿಗೆ ಒಂದು ಸೆಟ್ ಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಹಾಗೂ ಸರಕಾರಿ ಮುದ್ರಣಾಲಯದಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ದೇಶದ ಎಲ್ಲ ಭಾಗದ ಮಕ್ಕಳೊಂದಿಗೆ ನಮ್ಮ ಮಕ್ಕಳು ಸ್ಪರ್ಧಿಸಬೇಕಾಗಿದೆ. ಸಿಇಟಿ, ಜೆಇಇ, ನೀಟ್ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪರ್ಧಿಸಲು ಅನುವಾಗುವಂತೆ 2013-14ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಪ್ರಚಲಿತದಲ್ಲಿದ್ದ ಪಠ್ಯಕ್ರಮಗಳನ್ನು ಕೇಂದ್ರೀಯ ಶಾಲಾ-ಕಾಲೇಜುಗಳಲ್ಲಿ ಪಚಲಿತವಿರುವ ಪಠ್ಯಕ್ರಮಕ್ಕೆ ಬದಲಿಸಲಾಗಿದೆ ಎಂದು ಅವರು ಹೇಳಿದರು. ಈ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಕನಗವಲ್ಲಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







