ಬೆಳೆ ಹಾನಿ ಹಾಗೂ ಮನೆ ಹಾನಿಗಳ ನಿಖರ ಸಮೀಕ್ಷೆ ಮಾಡಿ: ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಸೂಚನೆ

ಉಡುಪಿ, ಆ.20: ಪ್ರಕೃತಿ ವಿಕೋಪದಿಂದ ಆದ ಮನೆ ಹಾನಿ ಹಾಗೂ ಬೆಳೆ ಹಾನಿಗಳ ಬಗ್ಗೆ ಸರಿಯಾಗಿ ಸ್ಥಳ ಪರಿಶೀಲನೆ ಮಾಡುವುದರೊಂದಿಗೆ ನಿಖರ ನಷ್ಟವನ್ನು ಅಂದಾಜಿಸಿ ಪರಿಹಾರ ನೀಡಬೇಕು ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ಜಿಲ್ಲೆಯ ಕಾನೂನು ಸುವ್ಯವಸ್ಥೆ, ಕೋವಿಡ್-19 ನಿಯಂತ್ರಣ ಕ್ರಮ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣ ಮತ್ತು ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ವೀಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ಇವುಗಳ ಹಾನಿ ಸಮೀಕ್ಷೆಯನ್ನು ಪ್ರಾಥಮಿಕ ಹಂತದಲ್ಲೇ ಸರಿಯಾಗಿ ನಡೆಸಿ ಪರಿಹಾರ ನೀಡಬೇಕು ಎಂದ ಅವರು, ಸರಿಯಾಗಿ ಮಾಡದೇ ಇರುವ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಬೆಳೆ ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ ಎಂದವರು ನುಡಿದರು.
ಜಿಲ್ಲೆಯ 68 ಗ್ರಾಮಗಳಲ್ಲಿ ಹೆಚ್ಚಿನ ಮಳೆ ಹಾನಿ ಆಗಿರುವುದು ಕಂಡುಬಂದಿದೆ. ಬೆಳೆ ಹಾನಿ ಸಮೀಕ್ಷೆಯನ್ನು ಗ್ರಾಮ ಲೆಕ್ಕಿಗರು, ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಸಿಬ್ಬಂದಿಗಳು ಸಂಯುಕ್ತವಾಗಿ ನಡೆಸಬೇಕು ಎಂದರು.
ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು ನದಿ ಪಾತ್ರದಲ್ಲಿ ಮಣ್ಣಿನ ಸವಕಳಿ, ಹಳ್ಳ-ಕೊಳ್ಳಗಳಲ್ಲಿ ನೀರು ಹರಿದು ಎರಡು ಭಾಗದ ಕೃಷಿ ಭೂಮಿ ಹಾನಿ ಸೇರಿದಂತೆ ಕಡಲ ಕೊರತೆಯಿಂದ ಆದ ನಷ್ಟವನ್ನು ನಿಖರ ವಾಗಿ ಸಮೀಕ್ಷೆ ಮಾಡುವುದರೊಂದಿಗೆ ಸರ್ಕಾರಕ್ಕೆ ವರದಿ ನೀಡಬೇಕು ಎಂದರು.
ಮನೆ ಹಾನಿ ಸಮೀಕ್ಷೆ ಮಾಡುವಾಗ ಶಿಥಿಲಗೊಂಡಿರುವ ಮನೆಗಳು ಸೇರಿದಂತೆ ಭಾಗಶ: ಹಾಗೂ ಪೂರ್ತಿ ಪ್ರಮಾಣದಲ್ಲಿ ಹಾನಿಯಾಗಿರುವ ಬಗ್ಗೆ ಹಾನಿಯ ನಿಖರತೆ ಆಧಾರಿಸಿ ಮಾನವೀಯತೆಯ ಆಧಾರದ ಮೇಲೆ ಅಂದಾಜಿಸುವ ಕಾರ್ಯವನ್ನು ಪಿಡಿಓ ಹಾಗೂ ಗ್ರಾಮ ಲೆಕ್ಕಿಗರು ಮಾಡಬೇಕು. ಇವುಗಳ ಉಸ್ತುವಾರಿಯನ್ನು ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿ ನಿರ್ವಹಿಸಬೇಕೆಂದು ಸಚಿವರು ಸೂಚನೆ ನೀಡಿದರು.
ಕೋವಿಡ್: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಮರಣದ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಬಗ್ಗೆ ಅವಶ್ಯವಿರುವ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಬೊಮ್ಮಾಯಿ ಸೂಚನೆ ನೀಡಿದರು. ಕೊರೋನ ಸೊಂಕಿತರಿಗೆ ಅಗತ್ಯವಿರುವ ಬೆಡ್‌ಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದ ಅವರು, ತುರ್ತು ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ದಾಸ್ತಾನು ಕೊರತೆಯಾಗಂತೆ ನೋಡಿಕೊಳ್ಳಬೇಕು ಎಂದರು.
ಕೋವಿಡ್ ಚಿಕತ್ಸೆ ನೀಡಲು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ವೈದ್ಯರು ಹಾಗೂ ಇತರ ಸಿಬ್ಬಂದಿಗಳಿಗೆ ಅಗತ್ಯವಿರುವ ವೇತನವನ್ನು ನೀಡಲು ಬೇಕಾದ ಅನುದಾನವನ್ನು ಸರಕಾರದಿಂದ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯ ಬಿತ್ತನೆ ಹಾಗೂ ರಸಗೊಬ್ಬರದ ದಸ್ತಾನು ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ರೈತರಿಗೆ ಅಗತ್ಯವಿರುವ ಯೂರಿಯಾ ಗೊಬ್ಬರದ ವಿತರಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳ ಬೇಕೆಂದು ಸೂಚನೆ ನೀಡಿದರು.
ಬೈಂದೂರು ಕಿರಿಮಂಜೇಶ್ವರದಲ್ಲಿ ದೋಣಿ ದುರಂತದಿಂದ ಮೃತರಾದ ಕುಟುಂಬಕ್ಕೆ ಮುಖ್ಯಮಂತ್ರಿಗಳ ವಿಶೇಷ ಹೆಚ್ಚುವರಿ ಪರಿಹಾರ ಕೊಡಿಸುವ ಸಲುವಾಗಿ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಪಂ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಉಪವಿಭಾಗಾಧಿಕಾರಿ ರಾಜು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.








