ಇಸ್ರೇಲ್ ಶಾಂತಿ ಒಪ್ಪಂದಕ್ಕೆ ಪ್ರತಿಯಾಗಿ ಅಮೆರಿಕದಿಂದ ಯುಎಇಗೆ ಎಫ್-35 ಯುದ್ಧ ವಿಮಾನ?

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಆ. 20: ಇಸ್ರೇಲ್ ನೊಂದಿಗಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರಲು ಯುಎಇಯು ಆ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಪ್ರತಿಯಾಗಿ ಯುಎಇಗೆ ಎಫ್-35 ಅದೃಶ್ಯ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಅಮೆರಿಕ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಬಲ್ಲ ಮೂಲವೊಂದು ಬುಧವಾರ ತಿಳಿಸಿದೆ.
ಒಪ್ಪಂದವೊಂದರ ಅಡಿಯಲ್ಲಿ ತಮ್ಮ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಹಾಗೂ ವ್ಯಾಪಕ ತಳಹದಿಯ ಹೊಸ ಸಂಬಂಧವನ್ನು ಸ್ಥಾಪಿಸಲು ತಾವು ನಿರ್ಧರಿಸಿದ್ದೇವೆ ಎಂದು ಕಳೆದ ವಾರ ಇಸ್ರೇಲ್ ಮತ್ತು ಯುಎಇ ಘೋಷಿಸಿದ್ದವು. ಈ ಒಪ್ಪಂದವನ್ನು ಏರ್ಪಡಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ನ ಸೇನಾ ಪ್ರಾಬಲ್ಯವನ್ನು ಕಡೆಗಣಿಸಬಹುದಾದ ಈ ಯುದ್ಧವಿಮಾನ ಮಾರಾಟವು ಯುಎಇ-ಇಸ್ರೇಲ್ ಶಾಂತಿ ಒಪ್ಪಂದದ ಬಳಿಕವೇ ಮುನ್ನೆಲೆಗೆ ಬಂದಿದೆ.
ಲಾಕ್ಹೀಡ್ ಮಾರ್ಟಿನ್ ಕಾರ್ಪ್ ನಿರ್ಮಾಣದ ಎಫ್-35 ಯುದ್ಧ ವಿಮಾನಗಳನ್ನು ಖರೀದಿಸುವ ಇಚ್ಛೆಯನ್ನು ಯುಎಇ ವ್ಯಕ್ತಪಡಿಸಿತ್ತು ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ಯುದ್ಧವಿಮಾನಗಳನ್ನು ಇಸ್ರೇಲ್ ಕೂಡ ತನ್ನ ಯುದ್ಧದಲ್ಲಿ ಬಳಸಿದೆ.
‘‘ಅವರು ಎಫ್-35 ಯುದ್ಧವಿಮಾನಗಳನ್ನು ಖರೀದಿಸಲು ಬಯಸಿದ್ದಾರೆ. ಏನಾಗುತ್ತದೆ ಎಂದು ನಾವು ನೋಡುತ್ತೇವೆ. ಅವರ ಬೇಡಿಕೆಯು ಪರಿಶೀಲನೆಯಲ್ಲಿದೆ’’ ಎಂದರು.
ಯುಎಇಗೆ ಎಫ್-35 ವಿಮಾನ ಮಾರಾಟಕ್ಕೆ ಇಸ್ರೇಲ್ ವಿರೋಧ
ಈ ನಡುವೆ, ಅಮೆರಿಕದ ಎಫ್-35 ಯುದ್ಧ ವಿಮಾನಗಳನ್ನು ಯುಎಇಗೆ ಮಾರಾಟ ಮಾಡುವ ಯಾವುದೇ ಪ್ರಸ್ತಾಪವನ್ನು ತನ್ನ ದೇಶ ವಿರೋಧಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ. ಈ ವಲಯದಲ್ಲಿ ತನ್ನ ಸೇನಾ ಪ್ರಾಬಲ್ಯವನ್ನು ಕಾಯ್ದುಕೊಂಡು ಹೋಗುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.







