ಸರಕಾರದ ಸಾವಿರಾರು ಇಮೇಲ್ ಖಾತೆಗಳಿಗೆ ಚೀನಾ ಕನ್ನ: ತೈವಾನ್ ಆರೋಪ

ತೈಪೇ (ತೈವಾನ್), ಆ. 20: ಚೀನಾದ ಹ್ಯಾಕರ್‌ಗಳು ತೈವಾನ್ ಸರಕಾರದ ಕನಿಷ್ಠ ಸಂಸ್ಥೆಗಳಿಗೆ ಕನ್ನ ಹಾಕಿದ್ದು, ಸುಮಾರು 6,000 ಇಮೇಲ್ ಖಾತೆಗಳಿಂದ ಮಾಹಿತಿ ಕದ್ದಿದ್ದಾರೆ ಎಂದು ತೈವಾನ್ ಅಧಿಕಾರಿಗಳು ಬುಧವಾರ ಆರೋಪಿಸಿದ್ದಾರೆ.
ಆಗಿರುವ ಹಾನಿ ಸಣ್ಣದೇನಲ್ಲ ಎಂದು ತೈವಾನ್‌ನ ಹಿರಿಯ ಸೈಬರ್ ಅಧಿಕಾರಿಯೊಬ್ಬರು ಹೇಳಿದರು. ಕನ್ನದ ಸಂಪೂರ್ಣ ಪರಿಣಾಮವನ್ನು ಅಂದಾಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
2016ರಲ್ಲಿ ತೈವಾನ್ ಅಧ್ಯಕ್ಷೆಯಾಗಿ ತ್ಸಾಯಿ ಇಂಗ್-ವೆನ್ ಆಯ್ಕೆಯಾದಂದಿನಿಂದ ತೈವಾನ್ ವಿರುದ್ಧದ ತನ್ನ ಸೈಬರ್ ದಾಳಿಯನ್ನು ಹೆಚ್ಚಿಸಿದೆ ಎಂದು ತೈಪೆ ಆರೋಪಿಸಿದೆ. ಸ್ವಯಮಾಡಳಿತ ಹೊಂದಿರುವ ತೈವಾನ್ ತನ್ನ ಭಾಗವೆನ್ನುವ ಚೀನಾದ ವಾದವನ್ನು ಮಾನ್ಯ ಮಾಡಲು ಈಗಿನ ಅಧ್ಯಕ್ಷೆ ನಿರಾಕರಿಸಿದ್ದಾರೆ.
ತೈವಾನ್ ಸ್ವತಂತ್ರ ರಾಷ್ಟ್ರ ಎನ್ನುವ ಅಧ್ಯಕ್ಷೆ ತ್ಸಾಯಿ ಈ ವರ್ಷದ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಪುನರಾಯ್ಕೆಯಾಗಿದ್ದಾರೆ. ಇದು ಚೀನಾದ ಆಡಳಿತವನ್ನು ತೈವಾನ್ ಜನತೆ ತಿರಸ್ಕರಿಸಿರುವ ಸ್ಪಷ್ಟ ಸೂಚನೆಯಾಗಿದೆ.
Next Story





