ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಬಹುದು: ಸಚಿವ ಸುಧಾಕರ್

ಬೆಂಗಳೂರು, ಆ.20: ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವುದರ ಕಡೆಗೆ ಚಿಂತೆನೆ ನಡೆಸಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ವೆವ್ರ ಸಂಸ್ಥೆ ಮತ್ತು ಪೋರ್ಚುಗೀಸ್‍ನ ಇನೋವೇವ್ ಗ್ರೂಪ್ ಸಹಯೋಗದಲ್ಲಿ ಆರಂಭಿಸಿರುವ ಹೆಲ್ತ್ ಕೇರ್ ಪಾಡ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಪಾಡ್‍ಗಳು ಚಲಿಸುವ ಆಸ್ಪತ್ರೆಯಂತಿವೆ. ಈ ತಂತ್ರಜ್ಞಾನಗಳನ್ನು ಎಲ್ಲಿ ಬೇಕಾದರು ಅಳವಡಿಸಿಕೊಳ್ಳಬಹುದಾಗಿದೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಬಹುದೆಂದು ತಿಳಿಸಿದರು.
ಈಗ ಚಾಲನೆ ಸಿಕ್ಕಿರುವ ಹೆಲ್ತ್ ಕೇರ್ ಪಾಡ್‍ನಲ್ಲಿ 4ರಿಂದ 9ಹಾಸಿಗೆಗಳಿರುತ್ತವೆ. ಈ ಪಾಡ್‍ಗಳನ್ನು ಅಳವಡಿಸಲು 500ಚದರ ಅಡಿ ಜಾಗ ಬೇಕಾಗುತ್ತದೆ. ಇವುಗಳನ್ನು ಆಸ್ಪತ್ರೆ, ಪಾರ್ಕಿಂಗ್ ಅಥವಾ ಯಾವುದೇ ಸುರಕ್ಷಿತವಾದ ಜಾಗದಲ್ಲಿ ಅಳವಡಿಸಬಹುದಾಗಿದೆ ಎಂದು ಇನೋವೇವ್ ಗ್ರೂಪ್ ಮುಖ್ಯಸ್ಥರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಸಿ,ಎನ್.ಮಂಜುನಾಥ್, ಎಂಸಿಐ ಸದಸ್ಯ ಡಾ. ವಿವೇಕ್ ಜವಳಿ ಮತ್ತಿತರರಿದ್ದರು.





