ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಅನುಮೋದನೆ: ಸಚಿವ ವಿ.ಸೋಮಣ್ಣ

ಬೆಂಗಳೂರು, ಆ.20: ರಾಜ್ಯದ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕುರಿತಾದ ವಸತಿ ಇಲಾಖೆಯ ಮಹತ್ವದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬಿಬಿಎಂಪಿ ಸೇರಿ ರಾಜ್ಯದ ವಿವಿಧ ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಸರಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಮಾಲಕತ್ವದಲ್ಲಿರುವ ಸುಮಾರು 6745 ಎಕರೆ ಜಮೀನಿನಲ್ಲಿ ಇರುವ 1873 ಕೊಳಚೆ ಪ್ರದೇಶಗಳ ಸುಮಾರು 3.13 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಪ್ರಸ್ತಾವನೆ ಇದಾಗಿದ್ದು, ರಾಜ್ಯದ ಸುಮಾರು 16 ಲಕ್ಷ ಕೊಳಗೇರಿ ನಿವಾಸಿಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲೇ ಸುಮಾರು 683 ಎಕರೆ ಸರಕಾರಿ ಜಾಗದಲ್ಲಿ 239 ಕೊಳಚೆ ಪ್ರದೇಶಗಳಿದ್ದು, ಸುಮಾರು 50 ಸಾವಿರ ಕುಟುಂಬಗಳು ವಾಸಿಸುತ್ತಿವೆ. ಕೊಳಗೇರಿ ನಿವಾಸಿಗಳು ತಮ್ಮ ವಾಸಸ್ಥಳದ ಹಕ್ಕಿನಿಂದ ಹಲವಾರು ವರ್ಷಗಳಿಂದ ವಂಚಿತರಾಗಿರುವುದನ್ನು ಮನಗಂಡು ಇವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರನ್ನಾಗಿಸಿ, ಸಮಾಜದ ಮುಖ್ಯವಾಹಿನಿಗೆ ತಂದು ಉತ್ತಮ ನಾಗರೀಕರಾಗಿ ಬದುಕಲು ಅವಕಾಶ ನೀಡುವ ಸದುದ್ದೇಶದಿಂದ ವಸತಿ, ನಗರಾಭಿವೃದ್ಧಿ, ಪೌರಾಡಳಿತ ಹಾಗೂ ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳೊಂದಿಗೆ ನಿರಂತರ ಚರ್ಚಿಸಿ, ಸಭೆ ನಡೆಸಿ ಈ ಪ್ರಸ್ತಾವನೆಗೆ ಒಂದು ತಾರ್ಕಿಕ ಅಂತ್ಯ ನೀಡಿರುವುದಕ್ಕೆ ತಮಗೆ ವೈಯಕ್ತಿಕವಾಗಿ ಖುಷಿ ಇದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ಸಮಾಜದ ಅತ್ಯಂತ ಕೆಳ ಹಾಗೂ ದುರ್ಬಲ ವರ್ಗದ ಜನರೇ ಹೆಚ್ಚಾಗಿ ವಾಸಿಸುವ ಕೊಳಚೆ ಪ್ರದೇಶದ ನಿವಾಸಿಗಳ ಬಹುದಿನದ ಕನಸನ್ನು ಈಡೇರಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಕ್ಕಾಗಿ ಸಿಎಂ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊಳಗೇರಿಯಲ್ಲಿ ವಾಸ ಮಾಡುವ ಎಲ್ಲ ಜನರು ಸರಕಾರದ ಈ ಮಹತ್ವದ ನಿರ್ಧಾರದಿಂದಾಗಿ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಿ ಸಮಾಜದ ಮುಖ್ಯವಾಹಿನಿಗೆ ಬರಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







