ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ: ಡಿ.ಕೆ.ಶಿವಕುಮಾರ್ ಆರೋಪ

ಬೆಂಗಳೂರು, ಆ. 21: `ನಿನ್ನೆ, ಮೊನ್ನೆವರೆಗೂ ನನ್ನ ಟೆಲಿಫೋನ್ ಸರಿಯಾಗಿಯೇ ಇತ್ತು. ಈಗ ನನಗೆ ಕರೆಗಳು ಸರಿಯಾಗಿ ಬರುತ್ತಿಲ್ಲ. ನನ್ನ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಶೀಘ್ರವೇ ದೂರು ನೀಡುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಟೆಲಿಫೋನ್ ಟ್ಯಾಪ್ ಆಗುತ್ತಿದೆ ಎಂದೆನಿಸುತ್ತಿದೆ. ಈ ಸಂಬಂಧ ನಾನು ಸಾಕ್ಷ್ಯ ಇಲ್ಲದೆ ಆರೋಪ ಮಾಡುವುದಿಲ್ಲ. ನಮ್ಮ ಸುದರ್ಶನ್ ಕಾಲ್ ಮಾಡಿದ್ದಾರೆ, ಆದರೆ, ಕಾಲ್ ಬರುತ್ತಿಲ್ಲ. ಬೆಳಗ್ಗೆಯಿಂದ ನನಗೆ 20ಕ್ಕೂ ಅಧಿಕ ಕರೆಗಳು ಬಂದಿವೆ. ಆದರೆ, ಯಾವ ಕರೆಯಲ್ಲೂ ಧ್ವನಿ ಕೇಳಿಸುತ್ತಿಲ್ಲ. ನನ್ನ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ದೂರಿದರು.
ಟೆಲಿಫೋನ್ ಕದ್ದಾಲಿಕೆ ಇದೇ ಮೊದಲೇನಲ್ಲ. ಈ ಮೊದಲು ಕದ್ದಾಲಿಕೆ ಮಾಡಲಾಗಿದೆ. ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಸಂಬಂಧ ನಾನು ಶೀಘ್ರವೇ ಸಂಬಂಧಪಟ್ಟವರಿಗೆ ದೂರು ನೀಡಲಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.
ನಗರ ಪೊಲೀಸ್ ಆಯುಕ್ತರಿಗೆ ದೂರು
'ಎರಡು-ಮೂರು ದಿನಗಳಿಂದ ನನ್ನ ಮೊಬೈಲ್ ದೂರವಾಣಿಗೆ ಒಳಬರುವ ಮತ್ತು ಹೊರಹೋಗುವ ಕರೆಗಳಲ್ಲಿ ಮಾತನಾಡುವಾಗ ಬಹಳ ವ್ಯತ್ಯಾಸವಾಗುತ್ತಿದ್ದು, ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ. ಅನಪೇಕ್ಷಿತ ಏರಿಳಿತವಾಗುತ್ತಿದೆ. ಅನಗತ್ಯ ಶಬ್ದವೂ ಕೇಳಿಬರುತ್ತಿದೆ. ಇವುಗಳೆಲ್ಲವನ್ನೂ ಸಮೀಕರಿಸಿ ನೋಡಿದಾಗ ನನ್ನ ಮೊಬೈಲ್ ದೂರವಾಣಿ ಕರೆಗಳು ಕದ್ದಾಲಿಕೆ ಆಗುತ್ತಿರಬಹುದು ಎಂದು ಬಲವಾದ ಅನುಮಾನ ಮೂಡುತ್ತಿದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಲಿಖಿತ ದೂರಿನಲ್ಲಿ ಕೋರಿದ್ದಾರೆ.







