ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದು ನಿಮ್ಮ ವಿಕೃತಿ: ಡಿಕೆಶಿ ವಿರುದ್ಧ ಸಚಿವ ಸುಧಾಕರ್ ಕಿಡಿ

ಬೆಂಗಳೂರು, ಆ. 21: `ಕೋವಿಡ್ ಸಂಕಷ್ಟದಲ್ಲಿ ವೈದ್ಯರ ಸಂಕಷ್ಟ ಏನು ಎಂದು ನಮಗೆ ಗೊತ್ತು. ಎಲ್ಲ ವೈದ್ಯರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪರ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡುತ್ತಿದ್ದೇವೆ. ಪ್ರಚಾರಕ್ಕೋಸ್ಕರ ಮಾತನಾಡಬೇಡಿ. `ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಲ್ಲುವವರು ಅದು ಯಾವ ಜಾತಿಯ ಮರವೆಂದು ನೋಡುವುದಿಲ್ಲ.' ಸಾವಿನ ವಿಷಯದಲ್ಲಿ ರಾಜಕೀಯ ಮಾಡುವುದು ತರವಲ್ಲ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಇಂದಿಲ್ಲಿ ಆಕ್ಷೇಪಿಸಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ನಾನೂ ಒಬ್ಬ ವೈದ್ಯನಾಗಿ, ಸರಕಾರದ ಪ್ರತಿನಿಧಿಯಾಗಿ, ಈ ಕೊರೋನ ವೈರಸ್ ಸೋಂಕಿನ ಸಂಕಷ್ಟ ಕಾಲದಲ್ಲಿ ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಕುಟುಂಬಕ್ಕೆ ಮತ್ತು ವೈದ್ಯ ಸಮೂಹಕ್ಕೆ ಸಹಾನುಭೂತಿ, ನೈತಿಕ ಸ್ಥೈರ್ಯ ತುಂಬಲಿಕ್ಕೆ ಹೋಗಿದ್ದು. ಸಾವಿನ ಮನೆಯಲ್ಲಿ ರಾಜಕಾರಣ ಮಾಡಿ ನನಗೆ ಅಭ್ಯಾಸವಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
`ಈಗಾಗಲೇ ಸಿಎಂ ಬಿಎಸ್‍ವೈ ದೈವಾಧೀನರಾದ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನ ಹಾಗೂ ಮೃತರ ಶ್ರೀಮತಿಯವರಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗ ನೀಡಲು ಭರವಸೆ ನೀಡಿದ್ದಾರೆ. ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ 7 ದಿನಗಳೊಳಗೆ ವರದಿ ನೀಡಲು ಮೈಸೂರಿನ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಗಿದೆ' ಎಂದು ಸುಧಾಕರ್ ಇದೇ ವೇಳೆ ತಿಳಿಸಿದ್ದಾರೆ.
ಡಾ.ನಾಗೇಂದ್ರ ಅವರ ಕೇಸ್ ಮುಚ್ಚಿ ಹಾಕೋದು ನಮ್ಮ ಕಾರ್ಯವೈಖರಿಯಲ್ಲ. ಅವೆಲ್ಲಾ ನಿಮ್ಮ ಕಾರ್ಯಗಳು. ಸಾವಿನ ಮನೆಗೆ ಸಾಂತ್ವನ ಹೇಳಲು ಹೋದಾಗ ಕೆಲವರು ಕೆಲವರ ನಿರ್ದೇಶನದಂತೆ ಮಾಡಲು ಬಂದಿದ್ದರೇ ವಿನಃ ನೋವನ್ನು ಹಂಚಿಕೊಳ್ಳಲು ಅಲ್ಲ. ಸಾವಿನ ಮನೆಯಲ್ಲಿ ರಾಜಕೀಯ ಮಾಡೋದು ನಿಮ್ಮ ವಿಕೃತಿ. ನಮ್ಮದು ಸಾಂತ್ವನ ಹೇಳುವ ಸುಸಂಸ್ಕೃತಿ' ಎಂದು ಸುಧಾಕರ್ ತಿಳಿಸಿದ್ದಾರೆ.
`ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ದೈವಾಧೀನರಾದ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇಲ್ಲ ಅಂತ ಕಾಣಿಸುತ್ತದೆ. ನಿರ್ದಿಷ್ಟವಾದ ಮಾಹಿತಿ ಪಡೆದುಕೊಂಡು ಮಾಧ್ಯಮಗಳ ಮುಂದೆ ಮಾತನಾಡಿದರೆ ಒಳ್ಳೆಯದಿತ್ತು. ಜವಾಬ್ದಾರಿ ಸ್ಥಾನದಲ್ಲಿ ಇದ್ದೀನಿ ಎಂದು ಹೇಳಿದ್ದೀರಿ. ಜನರಿಗೆ ದಾರಿತಪ್ಪಿಸುವ ಕೆಲಸ ಮಾಡಬೇಡಿ' ಎಂದು ಸುಧಾಕರ್, ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.







