ಕೊರೋನದಿಂದ ಚೇತರಿಸಿದ 107 ವರ್ಷದ ಮಹಿಳೆ, 78 ವರ್ಷದ ಪುತ್ರಿ

ಸಾಂದರ್ಭಿಕ ಚಿತ್ರ
ಮುಂಬೈ,ಆ.21: ಮಹಾರಾಷ್ಟ್ರದ ಜಾಲ್ನಾ ನಿವಾಸಿಯಾಗಿರುವ 107 ವರ್ಷದ ಮಹಿಳೆ ಮತ್ತು ಅವರ 78 ವರ್ಷದ ಪುತ್ರಿ ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುವ ಮೂಲಕ ವಯಸ್ಸಾದವರು ಸೋಂಕಿಗೆ ಬಲಿಯಾಗುವುದು ಹೆಚ್ಚು ಎಂಬ ಅಭಿಪ್ರಾಯಕ್ಕೆ ಸವಾಲೆಸೆದಿದ್ದಾರೆ.
ಹಳೆಯ ಜಾಲ್ನಾದ ಮಾಲಿಪುರ ನಿವಾಸಿಯಾದ ಶತಾಯುಷಿ ಮಹಿಳೆಗೆ ಇತ್ತೀಚಿಗೆ ಬೆನ್ನುಹುರಿಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಮತ್ತು ಆ ಸಂದರ್ಭದಲ್ಲಿ ಆಕೆ ಕೊರೋನ ವೈರಸ್ ಸೋಂಕಿಗೆ ಗುರಿಯಾಗಿರುವುದು ತಿಳಿದು ಬಂದಿತ್ತು. ಇದರ ಬೆನ್ನಿಗೇ ಮಹಿಳೆಯ 78 ವರ್ಷದ ಪುತ್ರಿ,65 ವರ್ಷದ ಪುತ್ರ ಹಾಗೂ 27 ಮತ್ತು 17 ವರ್ಷ ಪ್ರಾಯದ ಇಬ್ಬರು ಮೊಮ್ಮಕ್ಕಳಲ್ಲಿಯೂ ಕೊರೋನ ವೈರಸ್ ಸೋಂಕು ಪತ್ತೆಯಾಗಿತ್ತು. ಆ.11ರಂದು ಎಲ್ಲರನ್ನು ಜಾಲ್ನಾದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶತಾಯುಷಿ ಮಹಿಳೆಯ ವಯಸ್ಸು ಆಕೆಯ ಚೇತರಿಕೆಗೆ ಬಹುದೊಡ್ಡ ಸವಾಲೊಡ್ಡಿತ್ತು ಎಂದು ಜಿಲ್ಲಾ ಸಿವಿಲ್ ಸರ್ಜನ್ ಡಾ.ಅರ್ಚನಾ ಭೋಸಲೆ ತಿಳಿಸಿದರು.
ಎಲ್ಲ ಐವರೂ ಕೊರೋನ ವೈರಸ್ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು,ಗುರುವಾರ ಆಸ್ಪತ್ರೆಯ ಸಿಬ್ಬಂದಿಗಳು ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟಿದ್ದಾರೆ.
‘ನಾವು ಎಲ್ಲ ಆಸೆ ಕಳೆದುಕೊಂಡಿದ್ದೆವು. ಆಸ್ಪತ್ರೆಯ ವೈದ್ಯಕೀಯ ಸಮರ್ಪಣಾ ಮನೋಭಾವದಿಂದಾಗಿ ನಾವು ಬದುಕುಳಿದಿದ್ದೇವೆ. ಇದು ಪವಾಡವಲ್ಲದೆ ಬೇರೇನೂ ಅಲ್ಲ ’ಎಂದು ಶತಾಯುಷಿ ಮಹಿಳೆಯ ಪುತ್ರ ಸುದ್ದಿಗಾರರಿಗೆ ತಿಳಿಸಿದರು.







