ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆಗೆ ತರಬೇತಿ

ಉಡುಪಿ, ಆ.21: ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ವತಿಯಿಂದ ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆ ತರಬೇತಿ ಕಾರ್ಯಕ್ರಮವನ್ನು ಚೇರ್ಕಾಡಿ ಗ್ರಾಮದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ತರಬೇತಿ ಕಾರ್ಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ. ಧನಂಜಯ ಹಾಗೂ ತೋಟಗಾರಿಕಾ ವಿಜ್ಞಾನಿ ಡಾ. ಚೈತನ್ಯ ಎಚ್.ಎಸ್. ಮಾತನಾಡಿ, ರೈತರು ಮೊಬೈಲ್‌ಗೆ ಬೆಳೆ ಸಮೀಕ್ಷೆ ಆ್ಯಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ದಾಖಲಿಸ ಬಹುದು ಎಂದು ಮಾಹಿತಿ ನೀಡಿದರು.
ಬೆಳೆ ಸಮೀಕ್ಷೆ ಆ್ಯಪ್‌ನಿಂದ ಬೆಳೆ ಹಾನಿಯ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ಪಡೆಯಲು ಹಾಗೂ ಕನಿಷ್ಟ ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ಅರ್ಹ ಫಲಾನುಭಗಳನ್ನು ಗುರುತಿಸಲು ಉಪಯೋಗವಾಗುತ್ತದೆ ಎಂದರು. ಬೆಳೆ ಸಮೀಕ್ಷೆ ಆ್ಯಪ್ ಬಳಕೆ ಕುರಿತು ಸಾಮಾಜಿಕ ಜಾಲತಾಣ, ಪತ್ರಿಕೆಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗಿದೆ. ರೈತರ ಕ್ಷೇತ್ರಗಳಿಗೂ ಭೇಟಿ ಕೊಟ್ಟು ಮಾಹಿತಿ ಒದಗಿಸಲಾಗಿದೆ. ಆ.24 ನೊಂದಣಿಗೆ ಕೊನೆಯ ದಿನವಾಗಿದ್ದು ರೈತರು ತಪ್ಪದೇ ಬೆಳೆ ವಿವರಗಳನ್ನು ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಸಚಿನ್ ಯು.ಎಸ್ ಮಾತನಾಡಿ, ಗೂಗಲ್ ಪ್ಲೇ ಸ್ಟೋರ್‌ನಿಂದ ಬೆಳೆ ಸಮೀಕ್ಷೆ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವ ಮತ್ತು ಅದರಲ್ಲಿ ಬೆಳೆಗಳ ಮಾಹಿತಿಗಳನ್ನು ದಾಖಲಿ ಸುವ ಕುರಿತು ರೈತರಿಗೆ ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.







