ಗಲಭೆಗೆ ಪ್ರೇರಣೆ ನೀಡುವ ಹೇಳಿಕೆ ನೀಡಿದ ಮಂತ್ರಿಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ: ಡಿ.ಕೆ.ಶಿವಕುಮಾರ್ ಪ್ರಶ್ನೆ

ಬೆಂಗಳೂರು, ಆ. 21: `ಡಿ.ಜೆ.ಹಳ್ಳಿ ಗಲಭೆ ಸಂಬಂಧ ನಾನು ಪೊಲೀಸರಿಗೆ ಮನವಿ ಮಾಡಿದ್ದೇನೆ. ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ನನಗೆ ಅರಿವಿದೆ. ಅವರು ಕ್ಲೀನ್ ರೆಕಾರ್ಡ್ ಹೊಂದಿದ್ದಾರೆ. ಮಂತ್ರಿಗಳು ಇಂತವರಿಗೆ ನೋಟಿಸ್ ನೀಡಿ ಎಂದು ಹೇಳುತ್ತಿದ್ದಾರೆ. ಹಾಗೆ ಹೇಳಲು ಅವರಿಗೆ ಸಂವಿಧಾನದಲ್ಲಿ ಯಾವ ಅಧಿಕಾರವಿದೆ? ಇಂತಹ ಹೇಳಿಕೆಯಿಂದ ಅವರು ಪ್ರಭಾವ ಬೀರುತ್ತಿದ್ದಾರೆ. ತನಿಖೆ ಮಾಡಲಿ, ತಪ್ಪು ಮಾಡಿದ್ದರೆ ಅವರಿಗೆ ಯಾವ ಶಿಕ್ಷೆ ಬೇಕಾದರೂ ನೀಡಲಿ. ನಮ್ಮ ಅಭ್ಯಂತರವಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗಲಭೆ ಸಂಬಂಧ ಮೊದಲ ದಿನದಿಂದ ಇವತ್ತಿನವರೆಗೂ ನಾವು ಗಲಭೆಯನ್ನು ಖಂಡಿಸುತ್ತಿದ್ದೇವೆ. ನಾವು ಯಾರಿಗೂ ಬೆದರಿಕೆ ಹಾಕುತ್ತಿಲ್ಲ. ಆದರೆ ಸರಕಾರ ಅವರಿಗೆ ಬೆದರಿಕೆ ಹಾಕುತ್ತಿದೆ. ಕೊರೋನ ಸಮಯದಲ್ಲಿ ಮಂತ್ರಿಗಳು, ಬಿಜೆಪಿ ಶಾಸಕರು, ಸಂಸದರು ಕೋಮುಗಲಭೆಗೆ ಪ್ರೇರಣೆ ನೀಡುವ ಹೇಳಿಕೆ ನೀಡಿದ್ದರು. ಅದನ್ನು ತಡೆಯಲು ಸಿಎಂ ಯಾವುದಾದರೂ ಕ್ರಮ ಕೈಗೊಂಡರೇ? ಎಂದು ಪ್ರಶ್ನಿಸಿದರು.
ಈ ಗಲಭೆ ಬಗ್ಗೆ ಹೊರಗಿನ ಜನ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ ನೀಡುತ್ತಿದ್ದೀರಿ. ಇದಕ್ಕೆ ಈ ಬೆಳವಣಿಗೆಗಳು ಅಡ್ಡಿಯಾಗುತ್ತವೆ. ಶಿವಮೊಗ್ಗದಲ್ಲಿ ಕೂತು ಒಬ್ಬ ಮಂತ್ರಿ ಮಾತನಾಡಿದರೆ, ಮತ್ತೊಬ್ಬರು ಚಿಕ್ಕಮಗಳೂರಿನಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ... ಹೀಗೆ ಒಂದೊಂದು ಕಡೆಯಿಂದಲೂ ಹೇಳಿಕೆ ಬರುತ್ತಿವೆ. ಇವರಿಗೆ ಲಂಗು-ಲಗಾಮು ಇಲ್ವಾ? ಎಂದು ಶಿವಕುಮಾರ್ ಕೇಳಿದರು.
ಸರಕಾರ, ಪೊಲೀಸ್ ಇಲಾಖೆ ಹಾಗೂ ಗುಪ್ತಚರ ದಳದ ವೈಫಲ್ಯ ಮುಚ್ಚಿಕೊಳ್ಳಲು ಗಲಭೆಗೆ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು ಕಾರಣ ಎಂದು ದಾರಿ ತಪ್ಪಿಸಬೇಡಿ. ದೂರು ನೀಡುವಾಗ ಯಾರು, ಎಲ್ಲಿದ್ದರು ಎಲ್ಲವೂ ನನಗೆ ಗೊತ್ತಿದೆ. ತನಿಖೆಯ ಪಾಡಿಗೆ ತನಿಖೆ ನಡೆಯಲಿ. ಅದನ್ನು ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ. ಮಂತ್ರಿಗಳು ಪೊಲೀಸ್ ಅಧಿಕಾರಿಗಳಿಗೆ ಸ್ವತಂತ್ರವಾಗಿ ತನಿಖೆ ನಡೆಸಲು ಬಿಡಬೇಕು. ನೀವ್ಯಾಕೆ ದಾರಿ ತಪ್ಪಿಸುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ತಾವು ಆಡಿದ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರಾ? ಯಾವ ಸರಕಾರವೂ ಶಾಶ್ವತ ಅಲ್ಲ. ಇವತ್ತು ಇವರಿದ್ದರೆ, ನಾಳೆ ಮತ್ತೊಬ್ಬರು ಬರುತ್ತಾರೆ. ಆದರೆ, ಅಧಿಕಾರಿಗಳು ಶಾಶ್ವತ. ಅಧಿಕಾರಿಗಳು ಹರಕೆಯ ಕುರಿಯಾಗಬಾರದು. ನೊಟೀಸ್ ಕೊಟ್ಟು ಅವರನ್ನ ಕರೆಸಿ ಬೆದರಿಕೆ ಹಾಕುತ್ತಿದ್ದಾರೆ, ಇದು ಸರಿಯಲ್ಲ ಎಂದು ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ಆಕ್ಷೇಪಿಸಿದರು.
ಉತ್ತರ ಕರ್ನಾಟಕ ಪ್ರವಾಸ: ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಪರಿಶೀಲಿಸಬೇಕಿದೆ. ಹೀಗಾಗಿ ಕಳೆದ ವರ್ಷ ಏನಾಗಿತ್ತು? ಸರಕಾರ ಯಾವ ಭರವಸೆ ನೀಡಿತ್ತು? ಕೊಟ್ಟ ಭರವಸೆಯಲ್ಲಿ ಎಷ್ಟು ಈಡೇರಿಸಿದೆ ಎಂಬುದನ್ನು ನೋಡಬೇಕು. ಸರಕಾರ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ. ನಾಲ್ಕು ತಿಂಗಳಿಂದ ವೃದ್ಧರಿಗೆ ನೀಡುವ ಪಿಂಚಣಿಯನ್ನೇ ಕೊಟ್ಟಿಲ್ಲ ಎಂದರು.
ನೇಕಾರರು ರಾಜ್ಯದ ವಿವಿಧ ಭಾಗಗಳಿಂದ ದೂರು ನೀಡುತ್ತಿದ್ದಾರೆ. ಮಂತ್ರಿಗಳು ನಮ್ಮಲ್ಲಿ ತೀವ್ರ ನೆರೆ ಸ್ಥಿತಿ ಇಲ್ಲ ಎಂದಿದ್ದಾರೆ. ಹಾಗಾದರೆ ಮಾಧ್ಯಮಗಳು ತೋರಿಸಿದ್ದೇನು?. ಮಂತ್ರಿಗಳಾದವರು ಕಷ್ಟದ ಸಮಯದಲ್ಲಿ ಜನರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಬೇಕು. ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಬೇಕು. ಅದನ್ನು ಬಿಟ್ಟು ಹಬ್ಬ ಇದ್ದಾಗ ಹೋಗುವುದಲ್ಲ ಎಂದು ಶಿವಕುಮಾರ್ ಟೀಕಿಸಿದರು.
ಯಾರನ್ನು ರಕ್ಷಿಸಲು ಈ ಪ್ರಯತ್ನ?
`ಗಲಭೆ ಪ್ರಕರಣದ ಕಿಡಿಗೇಡಿಗಳ ವಿರುದ್ಧ ಪ್ರಾಮಾಣಿಕ ತನಿಖೆ ನಡೆಸುತ್ತಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೆಪಿಸಿಸಿ ಅಧ್ಯಕ್ಷರು ಸಾರ್ವಜನಿಕವಾಗಿ ಧಮ್ಕಿ ಹಾಕಿದ್ದಾರೆ ಮತ್ತು ಬಿಜೆಪಿ ಏಜೆಂಟ್ ಎಂದು ನಿಂದಿಸಿದ್ದಾರೆ. ಪ್ರಾಮಾಣಿಕ ತನಿಖೆಯ ಬಗ್ಗೆ ಇಷ್ಟು ಭಯ ಏಕೆ ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ? ಯಾರನ್ನು ರಕ್ಷಿಸಲು ಈ ಪ್ರಯತ್ನ?'
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ







