ಕೊಡೇರಿ ಬಂದರಿನಲ್ಲಿ ನಾಡದೋಣಿ ದುರಂತ: ಮೃತರ ಕುಟುಂಬಗಳಿಗೆ ಪರಿಹಾರದ ಆದೇಶ ಪತ್ರ ಹಸ್ತಾಂತರ

ಬೈಂದೂರು, ಆ.21: ಕೊಡೇರಿ ದೋಣಿ ದುರಂತದಲ್ಲಿ ಮೃತರ ಕುಟುಂಬ ಗಳಿಗೆ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ತಲಾ ಆರು ಲಕ್ಷ ರೂ. ಪರಿ ಹಾರ ಮೊತ್ತದ ಆದೇಶ ಪತ್ರವನ್ನು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾ ಪೂಜಾರಿ ಇಂದು ಹಸ್ತಾಂತರಿಸಿದರು.
ದುರಂತದಲ್ಲಿ ಮೃತರಾದ ಉಪ್ಪುಂದ ಗ್ರಾಮದ ಲಕ್ಷ್ಮಣ ಖಾರ್ವಿ, ಮಂಜು ನಾಥ ಖಾರ್ವಿ, ನಾಗ ಖಾರ್ವಿ, ಶೇಖರ್ ಖಾರ್ವಿ ಅವರ ಮನೆಗಳಿಗೆ ತೆರಳಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೃತರ ಕುಟುಂಬಗಳಿಗೆ ಪರಿಹಾರ ಮೊತ್ತದ ಆದೇಶ ಪತ್ರವನ್ನು ನೀಡಿ ಸಾಂತ್ವಾನ ಹೇಳಿದರು. ಇದೇ ಸಂದರ್ಭ ದಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ತಮ್ಮ ವೈಯಕ್ತಿಕ ನೆಲೆಯಲ್ಲಿ ತಲಾ 25ಸಾವಿರ ರೂ. ಸಹಾಯಧನವನ್ನು ಕುಟುಂಬಳಿಗೆ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮೃತರ ಕುಟುಂಬಗಳಿಗೆ ತುರ್ತು ಪರಿಹಾರ ನೀಡುವಂತೆ ಮುಖ್ಯಮಂತ್ರಿಯನ್ನು ವಿನಂತಿಸಿದ ಮೇರೆಗೆ ತಲಾ ಆರು ಲಕ್ಷ ರೂ. ಪರಿಹಾರ ಘೋಷಣೆ ಮಾಡ ಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಬೇಕಾದ ಎಲ್ಲ ರೀತಿಯ ಸಹಾಯಗಳನ್ನು ಈ ಕುಟುಂಬಗಳಿಗೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಅಗತ್ಯ ಇರುವ ಮೃತ ಮೀನುಗಾರರ ಕುಟುಂಬಗಳಿಗೆ ಮೀನುಗಾರಿಕೆ ಇಲಾಖೆಯಿಂದ ಮನೆ ಮಂಜೂರು ಮಾಡುವ ಪ್ರಯತ್ನ ಕೂಡ ಮಾಡ ಲಾಗುವುದು. ಅದೇ ರೀತಿ ದುರಂತದಲ್ಲಿ ದೋಣಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಲಾಗು ವುದು. ಕೊಡೇರಿ ಬಂದರಿನ ಬ್ರೇಕ್ ವಾಟರ್, ಹೂಳೆತ್ತುವ ಕಾಮಗಾರಿ ಬಗ್ಗೆ ಶೀಘ್ರವೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಬಳಿಕ ಸಚಿವರು ದುರಂತ ಸಂಭವಿಸಿದ ಕೊಡೇರಿ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ., ತಹಶೀಲ್ದಾರ್ ಬಿ.ಪಿ. ಪೂಜಾರ್, ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟ ರಮಣ ಖಾರ್ವಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಮದನ್ ಕುಮಾರ್, ತಾಪಂ ಸದಸ್ಯ ಕರಣ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







