ಕೋವಿಡ್19: ಬೆಂಗಳೂರಿನಲ್ಲಿ ಲಕ್ಷ ದಾಟಿದ ಸೋಂಕಿತರ ಸಂಖ್ಯೆ; ಒಟ್ಟು 1,635 ಮಂದಿ ಸಾವು
ಸೋಂಕಿನಿಂದ 99ರ ಹರೆಯದ ವೃದ್ಧೆ ಗುಣಮುಖ

ಬೆಂಗಳೂರು, ಆ.20: ನಗರದಲ್ಲಿ ಶುಕ್ರವಾರ ಒಂದೇ ದಿನ 2,948 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 22 ಜನರು ಮೃತರಾಗಿದ್ದಾರೆ.
ನಗರದಲ್ಲಿ ಇದುವರೆಗೆ ಒಟ್ಟು 1,02,770 ಮಂದಿಗೆ ಸೋಂಕಿ ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,635 ಜನರು ಸೋಂಕಿಗೆ ಬಲಿಯಾಗಿದ್ದಾರೆ. 66,602 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಪೈಕಿ ಶುಕ್ರವಾರ 2,580 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 34,532 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 149 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 1,33,436 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಗುರುವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 16,487 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 38,123 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.
ಕೊರೋನ ಗೆದ್ದ 99ರ ವೃದ್ಧೆ
ಕೊರೋನ ಸೋಂಕು ದೃಢಪಟ್ಟಿದ್ದ 99 ವರ್ಷದ ವೃದ್ಧೆಯೊಬ್ಬರು ಇದೀಗ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅವರು ಕೆಮ್ಮು ಜ್ವರದಿಂದ ಬಳಲುತ್ತಿದ್ದರು. ನಂತರ ಅವರನ್ನು ಮಲ್ಲೇಶ್ವರಂನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಆ.1ರಂದು ದಾಖಲಿಸಲಾಗಿತ್ತು.
''ಕೊರೋನ ಬಂದ ತಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ಹೆದರಿ ಮಾನಸಿಕ ಖಿನ್ನತೆಗೆ ಒಳಗಾಗುವ ಬದಲು ಧೈರ್ಯದಿಂದ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಹಿರಿಯರಿಗೆ ಕೊರೋನ ತೀವ್ರತೆ ಹೆಚ್ಚಾಗಿದ್ದರೂ, ಮಾನಸಿಕ ಸ್ಥೈರ್ಯದಿಂದ ಜಯ ಗಳಿಸಬಹುದು'' ಎಂದು ಅವರು ತಿಳಿಸಿದ್ದಾರೆ.







