ದ.ಕ. ಜಿಲ್ಲೆ : 202 ಮಂದಿಗೆ ಕೊರೋನ ಸೋಂಕು, ಐದು ಮಂದಿ ಮೃತ್ಯು

ಮಂಗಳೂರು, ಆ.21: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದಾಗಿ ಮೃತರ ಸಂಖ್ಯೆ ತ್ರಿಶತಕ ದಾಟಿದ್ದು, ಶುಕ್ರವಾರ ಮತ್ತೆ ಐವರು ಮೃತಪಟ್ಟಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಹೊಸದಾಗಿ 202 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಂಗಳೂರು, ಪುತ್ತೂರಿನಲ್ಲಿ ತಲಾ ಓರ್ವರು, ಬಂಟ್ವಾಳದ ಇಬ್ಬರು ಸೇರಿದಂತೆ ಹೊರಜಿಲ್ಲೆಯ ಓರ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಸಂಖ್ಯೆ 301ಕ್ಕೆ ಏರಿಕೆಯಾಗಿದೆ.
202 ಮಂದಿಗೆ ಸೋಂಕು: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಮುಂದುವರಿದಿದ್ದು, ಶುಕ್ರವಾರ ಮತ್ತೆ 202 ಮಂದಿಯಲ್ಲಿ ಸೋಂಕು ಖಚಿತವಾಗಿದೆ. ಮಂಗಳೂರು-139, ಬಂಟ್ವಾಳ-35, ಪುತ್ತೂರು-11, ಸುಳ್ಯ-3, ಬೆಳ್ತಂಗಡಿ-4, ಹೊರಜಿಲ್ಲೆಯ 10 ಮಂದಿಗೆ ಸೋಂಕು ದೃಢಪಟ್ಟಿದೆ.
ಸೋಂಕಿತರ ಪೈಕಿ 81 ಮಂದಿಗೆ ಸಾಮಾನ್ಯ ಶೀತ ಲಕ್ಷಣಗಳಿವೆ. ಸೋಂಕಿತರ ಸಂಪರ್ಕದಲ್ಲಿದ್ದ 41, ತೀವ್ರ ಉಸಿರಾಟ ತೊಂದರೆ-9, ಸೋಂಕು ನಿಗೂಢ ಪ್ರಕರಣದ 69 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 9,914ಕ್ಕೆ ಏರಿಕೆಯಾಗಿದೆ.
64 ಮಂದಿ ಗುಣಮುಖ: ಜಿಲ್ಲೆಯ ಕೋವಿಡ್ ಆರೈಕೆ ಕೇಂದ್ರದಿಂದ ಇಬ್ಬರು, ವಿವಿಧ ಆಸ್ಪತ್ರೆಗಳಿಂದ 12, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ಮಂದಿ ಸೇರಿದಂತೆ ಒಟ್ಟು 64 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಮುಕ್ತರಾದವರ ಸಂಖ್ಯೆ 7,193ಕ್ಕೆ ಏರಿದೆ. ಜಿಲ್ಲೆಯಲ್ಲಿ 2,420 ಸಕ್ರಿಯ ಪ್ರಕರಣಗಳಿವೆ.







