ಆ. 23-30: ಸಿಪಿಎಂನಿಂದ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ
ಮಂಗಳೂರು, ಆ.21: ಇದೇ ಆ.23ರಿಂದ 30ರವರೆಗೆ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸಿಪಿಎಂ ಪಕ್ಷದ ಕೇಂದ್ರ ಸಮಿತಿಯು ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ನಡೆಸಲು ಕರೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕು/ವಲಯ ಮಟ್ಟದಲ್ಲಿ ಸಾರ್ವಜನಿಕ ಪ್ರತಿಭಟನಾ ಕಾರ್ಯಕ್ರಮ ನಡೆಸಲು ಪಕ್ಷದ ಜಿಲ್ಲಾ ಸಮಿತಿ ನಿರ್ಣಯಿಸಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರಕಾರದ ಎಲ್ಲ ರಂಗಗಳು ವಿಫಲವಾಗಿವೆ. ಕೋವಿಡ್-19ನ್ನು ನಿಯಂತ್ರಿಸಲು ಹರಸಾಹಸಪಡುತ್ತಿದೆ. ಇದ ರಿಂದಾಗಿ 50 ಸಾವಿರಕ್ಕೂ ಹೆಚ್ಚು ಭಾರತದ ಅಮಾಯಕ ಪ್ರಜೆಗಳು ಸಾವನ್ನಪ್ಪಿದ್ದಾರೆ. ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿ ಯುವಜನತೆ ಕಂಗಾಲಾಗಿದೆ. ಕೋವಿಡ್‌ನ್ನು ನೆಪವಾಗಿಟ್ಟು ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ, ವಿದ್ಯಾರ್ಥಿ ಯುವಜನ ವಿರೋಧಿ, ದಲಿತ, ಅಲ್ಪಸಂಖ್ಯಾತ ಮತ್ತು ಮಹಿಳಾ ವಿರೋಧಿ ನೀತಿಗಳನ್ನು ದೇಶದಲ್ಲಿ ಸಂವಿಧಾನ ಬಾಹಿರವಾಗಿ ಜಾರಿ ಮಾಡುತ್ತಿದೆ ಎಂದರು.
ಕೇಂದ್ರ ಸರಕಾರವು ಜಾತ್ಯತೀತ ಸಂವಿಧಾನ ಮೌಲ್ಯಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ವಾಧಿ ಕಾರಿ ನೀತಿಗಳ ವಿರುದ್ಧ ದೇಶದ ಜನಸಮುದಾಯದ 16 ಹಕ್ಕೊತ್ತಾಯಗಳನ್ನು ಕೇಂದ್ರ ಸರಕಾರದ ಮುಂದಿಡಲು ಸಿಪಿಎಂ ಪಕ್ಷದ ಕೇಂದ್ರ ಸಮಿತಿ ನೀಡಿದ ಕರೆಯನ್ನು ಜಿಲ್ಲೆಯ ದೇಶಪ್ರೇಮಿ ಶಕ್ತಿಗಳು, ಸಂಘಟನೆಗಳು ಧ್ವನಿ ಸೇರಿಸಲು ಅವರು ವಿನಂತಿಸಿದ್ದಾರೆ.
ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಬಡ ಕುಟುಂಬಗಳಿಗೆ ತಕ್ಷಣದಿಂದ ಮುಂದಿನ 6 ತಿಂಗಳ ವರೆಗೆ ತಿಂಗಳಿಗೆ 7,500 ರೂ. ನಗದು ವರ್ಗಾವಣೆ ಮಾಡಬೇಕು. ತಕ್ಷಣದಿಂದಲೇ ಅಗತ್ಯವಿರುವ ಎಲ್ಲರಿಗೂ ಮುಂದಿನ ಆರು ತಿಂಗಳವರೆಗೆ ಪ್ರತಿಯೊಬ್ಬ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಿ ಕೂಲಿ ದರ ಏರಿಸಿ, ವರ್ಷದಲ್ಲಿ 200 ದಿನಗಳ ಕೆಲಸದ ಖಾತ್ರಿ ಒದಗಿಸಬೇಕು. ನಗರ ಉದ್ಯೋಗ ಖಾತ್ರಿ ಕಾಯ್ದೆ ತರಬೇಕು. ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಪ್ರಕಟಿಸಬೇಕು ಎಂದರು.
ಅಂತರ ರಾಜ್ಯ ವಲಸೆ ಕೆಲಸಗಾರರ (ಉದ್ಯೋಗ-ಸೇವಾ ಷರತ್ತು ನಿಯಂತ್ರಣ) ಕಾಯ್ದೆ 1979 ನ್ನು ತೆಗೆದುಹಾಕುವ ಪ್ರಸ್ತಾವವನ್ನು ರದ್ದು ಮಾಡಬೇಕು; ಬದಲಿಗೆ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು. ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರೀಯ ವೆಚ್ಚವನ್ನು ಕನಿಷ್ಠ ಜಿಡಿಪಿಯ ಶೇ.3ಕ್ಕೆ ಹೆಚ್ಚಿಸಬೇಕು. ಅಗತ್ಯ ವಸ್ತುಗಳ ಕಾಯ್ದೆ ತೆಗೆದುಹಾಕುವ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಎಲ್ಲ ಸುಗ್ರೀವಾಜ್ಞೆಗಳನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದರು.
ಈಗಿರುವ ಕಾರ್ಮಿಕ ಕಾನೂನುಗಳನ್ನು ರದ್ದು/ತಿದ್ದುಪಡಿ/ಅಮಾನತು ಮಾಡುವ ಎಲ್ಲ ಪ್ರಸ್ತಾವಗಳನ್ನು ಹಿಂದೆಗೆದುಕೊಳ್ಳಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ, ವಿಶೇಷವಾಗಿ ಭಾರತೀಯ ರೈಲ್ವೆ, ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು, ಬ್ಯಾಂಕ್, ವಿಮೆ, ರಕ್ಷಣಾ ಉತ್ಪಾದನಾ ವಲಯಗಳಲ್ಲಿನ ಉದ್ದಿಮೆಗಳ ಖಾಸಗೀಕರಣ ರದ್ದು ಮಾಡಬೇಕು. ಪ್ರಧಾನಮಂತ್ರಿ ಹೆಸರಿನಲ್ಲಿರುವ ಖಾಸಗಿ ಟ್ರಸ್ಟ್ ನಿಧಿಯಲ್ಲಿ ಸಂಗ್ರಹ ವಾಗಿರುವ ಎಲ್ಲ ನಿಧಿಗಳನ್ನು ಕೊರೋನ ಸೋಂಕು ಎದುರಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಆಗಸ್ಟ್‌ನಿಂದ ಬಂಧನದಲ್ಲಿರುವ ಎಲ್ಲರನ್ನು ತಕ್ಷಣ ಬಿಡುಗಡೆ ಮಾಡಬೇಕು.ಎಲ್ಲ ಸಂಪರ್ಕಗಳನ್ನು ಮತ್ತೆ ಸ್ಥಾಪಿಸಬೇಕು ಮತ್ತು ಜನಗಳ ಮುಕ್ತ ಓಡಾಟಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಯುಎಪಿಎ, ಎನ್‌ಎಸ್‌ಐ ರಾಜದ್ರೋಹದ ಕಾಯ್ದೆ ಮುಂತಾದ ಕರಾಳ ಕಾನೂನುಗಳ ಅಡಿಯಲ್ಲಿ ಬಂಧಿಸಿ ಜೈಲುಗಳಲ್ಲಿ ಇಟ್ಟಿರುವ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು. ಪರಿಸರ ಪರಿಣಾಮ ನಿರ್ಧಾರದ (ಇಐಎ) 2020ರ ಅಧಿಸೂಚನೆ ಹಿಂದೆಗೆದುಕೊಳ್ಳಬೇಕು. ಹೆಚ್ಚುತ್ತಿರುವ ದಲಿತರ ಮೇಲಿನ ಹಿಂಸಾಚಾರ, ಮಹಿಳೆಯರ ವಿರುದ್ಧದ ಕೌಟುಂಬಿಕ ಹಾಗೂ ಲೈಂಗಿಕ ದೌರ್ಜನ್ಯ, ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮತ್ತು ಆದಿವಾಸಿ ಬುಡಕಟ್ಟು ಜನಗಳ ಶೋಷಣೆ ಮಾಡುತ್ತಿರುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಸಂತ ಆಚಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







