ಸಂಸದೀಯ ಸಮಿತಿಯಿಂದ ಫೇಸ್‌ಬುಕ್ ವಿಚಾರಣೆ

ಹೊಸದಿಲ್ಲಿ,ಆ.21: ಫೇಸ್‌ಬುಕ್‌ನಿಂದ ರಾಜಕೀಯ ವಿವಾದಾತ್ಮಕ ಸುದ್ದಿಗಳ ನಿರ್ವಹಣೆ ಕುರಿತು ಸೃಷ್ಟಿಯಾಗಿರುವ ವಿವಾದದ ಹಿನ್ನಲೆಯಲ್ಲಿ,ಅದು ಭಾರತದಲ್ಲಿ ರಾಜಕೀಯ ವಿಷಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎನ್ನುವುದರ ಬಗ್ಗೆ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿಯು ಕಂಪನಿಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಿದೆ ಎಂದು ಸಮಿತಿಯ ಸದಸ್ಯರೋರ್ವರು ಶುಕ್ರವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಫೇಸ್‌ಬುಕ್ ಕುರಿತು ವರದಿಯೊಂದನ್ನು ಪ್ರಕಟಿಸಿದ ಬಳಿಕ ಕಂಪನಿ ಮತ್ತು ಅದರ ಭಾರತೀಯ ಮುಖ್ಯಸ್ಥೆ ಅಂಖಿ ದಾಸ್ ಅವರು ತೀವ್ರ ಟೀಕೆಗೊಳಗಾಗಿದ್ದಾರೆ. ಆಡಳಿತಾರೂಢ ಪಕ್ಷದ ರಾಜಕಾರಣಿಗಳಿಗೆ ದ್ವೇಷಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ದಾಸ್ ವಿರೋಧಿಸಿದ್ದರು ಎಂದು ವರದಿಯು ತಿಳಿಸಿತ್ತು.
ಸೆ.2ರಂದು ಸಮಿತಿಯ ಎದುರು ಹಾಜರಾಗುವಂತೆ ಗುರುವಾರ ಫೇಸ್‌ಬುಕ್‌ಗೆ ನೋಟಿಸ್ ಹೊರಡಿಸಲಾಗಿದ್ದು,ವಿವಾದಾತ್ಮಕ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ 30 ನಿಮಿಷಗಳ ಕಾಲ ಪ್ರಶ್ನಿಸಲಾಗುವುದು ಎಂದು ತಿಳಿಸಲಾಗಿದೆ.
ಭಾರತದಲ್ಲಿ ಫೇಸ್‌ಬುಕ್‌ನ ವ್ಯಾಪಕತೆಯ ಹಿನ್ನೆಲೆಯಲ್ಲಿ ಮತ್ತು ಹಿಂಸೆ ಹಾಗೂ ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ದ್ವೇಷ ಭಾಷಣಗಳ ಸಾಮರ್ಥ್ಯದಿಂದಾಗಿ ಇದೊಂದು ಗಂಭೀರ ವಿಷಯವಾಗಿದೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಸಮಿತಿ ಸದಸ್ಯರು ತಿಳಿಸಿದರು.
ವಿಚಾರಣಾ ಪ್ರಕ್ರಿಯೆ ಮುಗಿದ ಬಳಿಕ ಈ ವಿಷಯವು ಎಷ್ಟು ಕಳವಳಕಾರಿಯಾಗಿದೆ ಎನ್ನುವುದನ್ನು ನಿರ್ಧರಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷದ ರಾಜಕಾರಣಿಗಳಿಗೆ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸುವುದರಿಂದ ಭಾರತದಲ್ಲಿ ಕಂಪನಿಯ ವ್ಯವಹಾರಕ್ಕೆ ಹಾನಿಯುಂಟಾಗುತ್ತದೆ ಎಂದು ದಾಸ್ ಸಿಬ್ಬಂದಿಗಳಿಗೆ ತಿಳಿಸಿದ್ದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಫೇಸ್‌ಬುಕ್‌ನ ನೀತಿಗಳಿಗಾಗಿ ಪ್ರತಿಪಕ್ಷ ಕಾಂಗ್ರೆಸ್ ಅದನ್ನು ಟೀಕಿಸಿದ್ದರೆ,ಅದು ರಾಷ್ಟ್ರವಾದಿ ಧ್ವನಿಗಳನ್ನು ಸೆನ್ಸಾರ್ ಮಾಡುತ್ತಿದೆ ಎಂದು ಆಡಳಿತ ಪಕ್ಷದ ಕೆಲವು ಸಂಸದರು ಆರೋಪಿಸಿದ್ದಾರೆ.







