ರಾಜ್ಯದ ನೀರಾವರಿ ಕ್ಷೇತ್ರಗಳ ಹೆಚ್ಚಳಕ್ಕೆ ಸರ್ಕಾರ ಬದ್ಧ: ಮುಖ್ಯಮಂತ್ರಿ ಯಡಿಯೂರಪ್ಪ

ಮೈಸೂರು,ಆ.21: ಪ್ರಕೃತಿ ಮಾತೆ ಕನ್ನಡ ನಾಡನ್ನು ಪ್ರಾಕೃತಿಕವಾಗಿ ಸಂಪದ್ಭರಿತವಾಗಿಸಿದ್ದು ಅದರ ಸದ್ಬಳಕೆ ನಮ್ಮೆಲ್ಲರ ಹೊಣೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿಯಲ್ಲಿ ಶುಕ್ರವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಕಬಿನಿ ಜಲಾಶಯದ ಕೆಳಭಾಗದಲ್ಲಿ ಮೇಲ್ಮಟ್ಟದ ಸೇತುವೆ ಹಾಗೂ ಸಂಪರ್ಕ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಪಿಲಾ ನದಿ ಮೈದುಂಬಿ ಹರಿಯುತ್ತಿರುವ ಕಬಿನಿ ಜಲಾಶಯಕ್ಕೆ ಸಂಪ್ರದಾಯದಂತೆ ಬಾಗಿನ ಸಮರ್ಪಿಸಿದ್ದೇನೆ. ಕಬಿನಿ ಜಲಾಶಯ ನಿರ್ಮಾಣವಾದಾಗಿನಿಂದ 29 ಬಾರಿ ತುಂಬಿದ್ದು ಕಳೆದ 3 ವರ್ಷಗಳಿಂದ ಸತತವಾಗಿ ಜಲಾಶಯವು ಪೂರ್ಣಮಟ್ಟಕ್ಕೆ ತುಂಬುತ್ತಿದೆ. ಈ ಬಾರಿ ವರುಣನ ಕೃಪೆಯಿಂದ ರೈತರು ಸಂಭ್ರಮದಿಂದ ಬೇಸಾಯದಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಬಾರಿ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಈ ಭಾಗದ ಕೆಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡು ತೊಂದರೆಗೀಡಾಗಿದ್ದರಿಂದ ಇಂದು ಕಬಿನಿ ಜಲಾಶಯದ ಕೆಳಭಾಗದಲ್ಲಿ ಮೇಲ್ಮಟ್ಟದ ಸೇತುವೆ ಹಾಗೂ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸುವ ಮೂಲಕ ಈ ಭಾಗದ ಜನರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದರು.
ಕಬಿನಿ ಅಣೆಕಟ್ಟೆಯ ಕೇಳಭಾಗದಲ್ಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮತ್ತು ಮಾನಂದವಾಡಿ ಮುಖ್ಯರಸ್ತೆಯಿಂದ ಕಬಿನಿ ಜಲಾಶಯಕ್ಕೆ ಸಂಪರ್ಕ ರಸ್ತೆಯ ಅಭಿವೃದ್ಧಿಗೆ 50.30 ಕೋಟಿ ರೂ.ಗಳ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯದ ನೀರಾವರಿ ಕ್ಷೇತ್ರದ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದ್ದು ನೀರಾವರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗಿದೆ. ಇದರಂತೆ ಈವರೆಗೆ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗಿನಿಂದ ಸುಮಾರು 7,400 ಕೋಟಿ ರೂಗಳ 28 ವಿವಿಧ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದು ಕಾಮಗಾರಿಗಳು ವಿವಿಧ ಹಂತದಲ್ಲಿ ಅನುಷ್ಠಾನದಲ್ಲಿವೆ. ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ 52 ಗ್ರಾಮಗಳಿಗೆ 121 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಹಾಗೂ ಕಬಿನಿ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿಯನ್ನು ಕೈಗೊಂಡಿದ್ದನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದರು.
ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯದ ನೀರಾವರಿ ಕ್ಷೇತ್ರದ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದ್ದು ನೀರಾವರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗಿದೆ. ಒಟ್ಟಾರೆಯಾಗಿ ನಮ್ಮ ಸರ್ಕಾರವು ರೈತರು ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ರೈತರ ಜಮೀನುಗಳಿಗೆ ನೀರು ಒದಗಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ನೀರು ವ್ಯರ್ಥವಾಗದಂತೆ ತಡೆಯಲು ಜಲಾಶಯಗಳ ಕಾಲುವೆಗಳ ಆಧುನೀಕರಣ ಸೇರಿದಂತೆ ಏತ ನೀರಾವರಿ ಹಾಗೂ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಕೈಗೊಂಡಿದ್ದೇವೆ. ಈಗಿನ ಆರ್ಥಿಕ ಇತಿಮಿತಿಯಲ್ಲಿಯೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರವು ನಿರ್ಧರಿಸಿದೆ. ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿಗೆ ಆಧಾರವಾಗಿರುವ ಕಾವೇರಿ ನದಿ ನೀರಿನ ಸಮರ್ಪಕ ನಿರ್ವಹಣೆಗೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಹಲವರು ಉಪಸ್ಥಿತರಿದ್ದರು.







