ಕೊರೋನ ಲಕ್ಷಣಗಳಿದ್ದರೆ ಹಿಂಜರಿಕೆಯಿಲ್ಲದೆ ತಪಾಸಣೆಗೊಳಗಾಗಿ: ಶಾಲಿನಿ ರಜನೀಶ್
ಬೆಂಗಳೂರು, ಆ.21: ಜನತೆಯು ಕೊರೋನ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹಿಂಜರಿಕೆ ಬಿಟ್ಟು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಕೋವಿಡ್ ಪರೀಕ್ಷೆಯ ಉಸ್ತುವಾರಿ ಹಾಗೂ ಹೆಚ್ಚುವರಿ ಮುಖು ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
ಸಾರ್ವಜನಿಕರು ಸೋಂಕು ಕಾಣಿಸಿಕೊಂಡ ಕೂಡಲೇ ಪರೀಕ್ಷೆಗೊಳಗಾದರೆ ಸೋಂಕು ಹರಡುವುದನ್ನು ತಪ್ಪಿಸಲು ಸಹಕಾರಿಯಾಗುತ್ತದೆ. ಆದರೆ, ಜನತೆ ಹಲವು ತಪ್ಪು ಕಲ್ಪನೆಗಳಿಂದ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ಅವರ ಜತೆಗಿನ ಕುಟುಂಬದ ಸದಸ್ಯರಿಗೂ ಅಪಾಯ ಆಗುವ ಸಾಧ್ಯತೆ ಇರುತ್ತದೆ ಎಂದರು.
ಜ್ವರ, ಕೆಮ್ಮು, ಶೀತ ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಂಡಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜ್ವರ ಚಿಕಿತ್ಸಾಲಯಗಳ ಜತೆಗೆ ಮೊಬೈಲ್ ವ್ಯಾನ್ ಮೂಲಕ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಕಂಟೈನ್‍ಮೆಂಟ್ ಪ್ರದೇಶ, ಕೊಳಗೇರಿ ಪ್ರದೇಶ ಸೇರಿದಂತೆ ಹೆಚ್ಚಿನ ಅಪಾಯ ಇರುವ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಮಾಡುತ್ತಿದ್ದೇವೆ.
ಆಂಟಿಜೆನ್ ಪರೀಕ್ಷೆಯಲ್ಲಿ ಅರ್ಧಗಂಟೆಯಲ್ಲಿಯೇ ವರದಿ ಬರಲಿದೆ. ಲಕ್ಷಣಗಳು ಇರುವ ವ್ಯಕ್ತಿ ಸೋಂಕಿತನಾಗಿಲ್ಲ ಎಂಬ ವರದಿ ಬಂದಲ್ಲಿ ಎರಡನೇ ಬಾರಿ ಆರ್‍ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕಂಟೈನ್‍ಮೆಂಟ್ ವಲಯದಲ್ಲಿ ಅಧಿಕ ಪ್ರಕರಣಗಳು ವರದಿಯಾಗಿದ್ದರೂ ಅಲ್ಲಿ ಎಲ್ಲರೂ ಸೋಂಕಿತರಾಗಿಲ್ಲ. ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಉತ್ತಮ ಜೀವನಶೈಲಿ ಹಾಗೂ ಆಹಾರ ಕ್ರಮ ಅಳವಡಿಸಿಕೊಂಡಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಾಗ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರಾಯಿತು ಎಂಬ ಮನೋಭಾವದಿಂದ ಹೊರಬರಬೇಕು ಎಂದು ತಿಳಿಸಿದ್ದಾರೆ.







