ಗಾಝಾದ ಮೇಲೆ ಇಸ್ರೇಲಿ ಬಾಂಬ್ ದಾಳಿ ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಲಿ: ಪಿಎಫ್ಐ ಆಗ್ರಹ
ಬೆಂಗಳೂರು, ಆ.23: ಗಾಝಾದ ಮೇಲೆ ನಡೆಯುತ್ತಿರುವ ಇಸ್ರೇಲಿ ಬಾಂಬ್ ದಾಳಿಯನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಒ.ಎಂ.ಒ.ಸಲಾಮ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಕಳೆದ ಏಳು ದಿನಗಳಿಂದ ಇಸ್ರೇಲಿ ಯುದ್ಧ ವಿಮಾನಗಳು ಗಾಝಾ ಪಟ್ಟಿಯ ವಿವಿಧ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿವೆ. ಇಸ್ರೇಲಿ ಯುದ್ಧಗಳಿಂದಾಗಿ ಗಾಝಾ ಪ್ರದೇಶದ ಎರಡು ದಶಲಕ್ಷಕ್ಕೂ ಹೆಚ್ಚು ಜನರು ನರಳುತ್ತಿದ್ದು, ಪಟ್ಟಿಯ ಮೇಲೆ ಹೇರಲಾಗಿರುವ ದಿಗ್ಭಂಧನದಿಂದಾಗಿ ಜನರು ಆಹಾರ, ಇಂಧನ ಮತ್ತು ಔಷಧಿ ಸೇರಿದಂತೆ ಪ್ರಮುಖ ಸರಕುಗಳಿಂದ ವಂಚಿತರಾಗಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಮಾನವೀಯ ಕಾರ್ಯಕರ್ತರು ಗಾಝಾ ಪಟ್ಟಿಯನ್ನು ಬಯಲು ಬಂದೀಖಾನೆ ಎಂದು ಕರೆದಿದ್ದಾರೆ.
ಇಸ್ರೇಲ್ ಆಗಸ್ಟ್ 12ರಂದು ಗಾಝಾಗೆ ಇಂಧನ ಆಮದನ್ನು ನಿಷೇಧಿಸಿದ್ದು, ಇದರಿಂದಾಗಿ ಪಟ್ಟಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಗಂಭೀರ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರ ಪರಿಣಾಮವು ಅಲ್ಲಿನ ಜನರ ದೈನಂದಿನ ಜೀವನಕ್ಕೆ ಸೀಮಿತವಾಗಿರದೆ, ಆರೋಗ್ಯ ರಕ್ಷಣೆಯಂತಹ ಪ್ರಮುಖ ಸೇವೆಗಳ ಮೇಲೂ ಬಹಳಷ್ಟು ಪರಿಣಾಮ ಬೀರಲಿದೆ. ಗಾಝಾ ತಟದಿಂದ ಮೀನುಗಾರಿಕೆಯ ನಿಷೇಧದಿಂದ ಬಡ ಜನರ ಮೇಲೂ ಪರಿಣಾಮ ಬೀರಲಿದೆ. ತಮ್ಮ ಕಣ್ಣ ಮುಂದೆಯೇ ಒಂದು ಸಮುದಾಯವನ್ನು ವ್ಯವಸ್ಥಿತ ಮತ್ತು ಸಾಮೂಹಿಕ ಶಿಕ್ಷೆಗೆ ಗುರಿಪಡಿಸುತ್ತಿರುವಾಗ, ಅದರ ಕುರಿತು ಜಗತ್ತು ಕೇವಲ ಮೂಕಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ವಿಶ್ವಸಂಸ್ಥೆಯ ನಿರ್ಬಂಧಗಳು ಸೇರಿದಂತೆ ಕಠಿಣ ಕ್ರಮಗಳ ಮೂಲಕ ಮಾತ್ರವೇ ಇಸ್ರೇಲಿ ಬಾಂಬ್ ದಾಳಿ ಮತ್ತು ಗಾಝಾದ ಕತ್ತು ಹಿಸುಕುವಿಕೆಯನ್ನು ತಡೆಯಬಹುದಾಗಿದೆ ಎಂದು ಒ.ಎಂ.ಎ. ಸಲಾಂ ಪ್ರಕಟನೆಯಲ್ಲಿ ಹೇಳಿದ್ದಾರೆ.







