ಕೋವಿಡ್‍ನಿಂದ ಸಾರಿಗೆ ಇಲಾಖೆಗೆ 700 ಕೋಟಿ ರೂ.ಗಳಿಗೂ ಅಧಿಕ ನಷ್ಟ: ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ, ಆ. 23: ರಾಜ್ಯದಲ್ಲಿ ಕಾಡುತ್ತಿರುವ ಕೊರೋನ ವೈರಸ್‍ನಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ಇಲ್ಲಿಯವರೆಗೂ ಸುಮಾರು 700 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಆಗಿರುವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ರವಿವಾರ ಅಥಣಿ ತಾಲೂಕಿನಲ್ಲಿ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಇತರೆ ಇಲಾಖೆಗಳನ್ನು ಹೋಲಿಸಿಕೊಂಡರೆ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಉಂಟಾಗಿದೆ. ಆದರೂ 1.30 ಲಕ್ಷ ಸಾರಿಗೆ ಸಿಬ್ಬಂದಿಗಳ ವೇತನಕ್ಕೆ ಸಮಸ್ಯೆಯಾಗದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರ್ಥಿಕ ಸಹಾಯ ಮಾಡಿದ್ದಾರೆಂದು ತಿಳಿಸಿದರು
ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತದೆ. ಮೊದಲನೆಯದಾಗಿ ಇಲಾಖೆಯಿಂದ ಕೊರಿಯರ್ ಸರ್ವಿಸ್ ಮಾಡಲು ನಿರ್ಧರಿಸಿದ್ದೇವೆ. ಅದರ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಜನತೆಗೆ ಕೊರಿಯರ್ ಸರ್ವಿಸ್ ಸಿಗಲಿದೆ. ಪ್ರತಿ ಹಳ್ಳಿಗೂ ಇದರ ಸೇವೆ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಅಥಣಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಾಗೂ ಉತ್ತಮ ಚಿಕಿತ್ಸೆ ನೀಡುವುದಕ್ಕಾಗಿ ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. ಇದನ್ನು ತಾಲೂಕು ಜನತೆ ಸದುಪಯೋಗ ಪಡಿಸಿಕೊಳ್ಳಬೇಕು. ಸಾರಿಗೆ ಇಲಾಖೆಯಿಂದ ಬಸ್‍ಗಳಲ್ಲಿ ಫಿವರ್ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಅಥಣಿ ತಾಲೂಕಿಗೂ ಒಂದು ಬಸ್‍ನ್ನು ಕಳುಹಿಸಲಾಗುವುದೆಂದು ಅವರು ಹೇಳಿದರು.







