ದೇಶದಲ್ಲಿ 30 ಲಕ್ಷ ದಾಟಿದ ಕೋವಿಡ್-19 ಪ್ರಕರಣಗಳ ಸಂಖ್ಯೆ

ಹೊಸದಿಲ್ಲಿ,ಆ.23: ಕೇವಲ 16 ದಿನಗಳ ಹಿಂದಷ್ಟೇ 20 ಲಕ್ಷದ ಮೈಲಿಗಲ್ಲು ದಾಟಿದ್ದ ದೇಶದಲ್ಲಿಯ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಈಗ 30 ಲಕ್ಷವನ್ನು ದಾಟಿದೆ. ಇದೇ ವೇಳೆ ಈವರೆಗೆ 22,80,566 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು,ಚೇತರಿಕೆ ದರವು ಶೇ.74.90ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರವಿವಾರ ಬೆಳಿಗ್ಗೆ ತಿಳಿಸಿದೆ.
ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ತಲುಪಲು 110 ದಿನಗಳನ್ನು ತೆಗೆದುಕೊಂಡಿದ್ದರೆ,ಮುಂದಿನ 59 ದಿನಗಳಲ್ಲಿ ಅದು 10 ಲ.ವನ್ನು ದಾಟಿತ್ತು. ಅಲ್ಲಿಂದ ಕೇವಲ 21 ದಿನಗಳಲ್ಲಿ ಆ.7ರಂದು ಈ ಸಂಖ್ಯೆ 20 ಲ.ಕ್ಕೇರಿತ್ತು.
ರವಿವಾರ ಬೆಳಿಗ್ಗೆ ಎಂಟು ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 69,239 ಸೋಂಕು ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 30,44,940ಕ್ಕೆ ತಲುಪಿದೆ. ಈ ಅವಧಿಯಲ್ಲಿ 912 ಜನರು ಸಾವನ್ನಪ್ಪಿದ್ದು,ಒಟ್ಟು ಸಾವುಗಳ ಸಂಖ್ಯೆ 56,706ಕ್ಕೇರಿದೆ. ಇದೇ ವೇಳೆ ಕೋವಿಡ್-19 ಮರಣ ದರ ಶೇ.1.86ಕ್ಕಿಳಿದಿದೆ.
ದೇಶದಲ್ಲೀಗ 7,07,668 ಪ್ರಕರಣಗಳು ಸಕ್ರಿಯವಾಗಿದ್ದು,ಇದು ಒಟ್ಟು ಪ್ರಕರಣಗಳ ಶೇ.23.24ರಷ್ಟಿದೆ.
ಆ.22ರವರೆಗೆ ಒಟ್ಟು 3,52,92,220 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು,ಶನಿವಾರ ಒಂದೇ ದಿನ 8,01,147 ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಹೇಳಿಕೆಯಲ್ಲಿ ತಿಳಿಸಿದೆ.
ಶನಿವಾರ ಬೆಳಿಗ್ಗೆಯಿಂದೀಚಿಗೆ ವರದಿಯಾಗಿರುವ 912 ಸಾವುಗಳ ಪೈಕಿ 297 ಮಹಾರಾಷ್ಟ್ರದಲ್ಲಿ,97 ಆಂಧ್ರಪ್ರದೇಶದಲ್ಲಿ,93 ಕರ್ನಾಟಕದಲ್ಲಿ,80 ತಮಿಳುನಾಡಿನಲ್ಲಿ,70 ಉತ್ತರ ಪ್ರದೇಶದಲ್ಲಿ,48 ಪ.ಬಂಗಾಳದಲ್ಲಿ,45 ಪಂಜಾಬಿನಲ್ಲಿ,21 ಮಧ್ಯಪ್ರದೇಶದಲ್ಲಿ,ತಲಾ 15 ಜಮ್ಮು-ಕಾಶ್ಮೀರ ಮತ್ತು ಕೇರಳದಲ್ಲಿ, ತಲಾ 14 ದಿಲ್ಲಿ ಮತ್ತು ಗುಜರಾತಿನಲ್ಲಿ,12 ಹರ್ಯಾಣದಲ್ಲಿ,ತಲಾ 11 ರಾಜಸ್ಥಾನ, ತೆಲಂಗಾಣ ಮತ್ತು ಜಾರ್ಖಂಡ್‌ಗಳಲ್ಲಿ ಸಂಭವಿಸಿವೆ.
ಛತ್ತೀಸ್‌ಗಡ ಮತ್ತು ಒಡಿಶಾಗಳಲ್ಲಿ ತಲಾ 9,ಪುದುಚೇರಿಯಲ್ಲಿ 8,ಅಸ್ಸಾಮಿನಲ್ಲಿ 7,ಬಿಹಾರ ಮತ್ತು ಗೋವಾದಲ್ಲಿ ತಲಾ 5,ಹಿಮಾಚಲ ಪ್ರದೇಶದಲ್ಲಿ 4,ಉತ್ತರಾಖಂಡದಲ್ಲಿ 3,ಲಡಾಖ್,ಮಣಿಪುರ ಮತ್ತು ತ್ರಿಪುರಾದಲ್ಲಿ ತಲಾ 2 ಹಾಗೂ ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ತಲಾ ಒಂದು ಸಾವುಗಳು ಸಂಭವಿಸಿವೆ.
ಒಟ್ಟು 56,706 ಸಾವುಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (21,995) ಅಗ್ರಸ್ಥಾನದಲ್ಲಿದ್ದರೆ ತಮಿಳುನಾಡು (6,420),ಕರ್ನಾಟಕ (4,614),ದಿಲ್ಲಿ(4284),ಆಂಧ್ರಪ್ರದೇಶ (3,189),ಗುಜರಾತ (2,881),ಉತ್ತರ ಪ್ರದೇಶ (2,867),ಪ.ಬಂಗಾಳ (2,737), ಮಧ್ಯಪ್ರದೇಶ (1,206),ಪಂಜಾಬ(1,036),ರಾಜಸ್ಥಾನ (944),ತೆಲಂಗಾಣ (755),ಜಮ್ಮು-ಕಾಶ್ಮೀರ (608),ಹರ್ಯಾಣ (597),ಬಿಹಾರ (503),ಒಡಿಶಾ (399),ಜಾರ್ಖಂಡ್(308),ಅಸ್ಸಾಂ(234),ಕೇರಳ (218),ಉತ್ತರಾಖಂಡ (195), ಛತ್ತೀಸ್‌ಗಡ (189),ಪುದುಚೇರಿ (151),ಗೋವಾ (140),ತ್ರಿಪುರಾ (72),ಚಂಡಿಗಡ (33),ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (32),ಹಿಮಾಚಲ ಪ್ರದೇಶ (29),ಮಣಿಪುರ (22),ಲಡಾಖ್ (21),ನಾಗಾಲ್ಯಾಂಡ್ (9),ಮೇಘಾಲಯ (7),ಅರುಣಾಚಲ ಪ್ರದೇಶ (5),ಸಿಕ್ಕಿಂ (3) ಹಾಗೂ ದಾದ್ರಾ ಮತ್ತು ನಗರ ಹವೇಲಿ,ದಮನ್ ಮತ್ತು ದಿಯು (ತಲಾ2) ನಂತರದ ಸ್ಥಾನಗಳಲ್ಲಿವೆ.
ಶೇ.70ಕ್ಕೂ ಅಧಿಕ ಸಾವುಗಳ ಪ್ರಕರಣಗಳಲ್ಲಿ ರೋಗಿಗಳು ಇತರ ಕಾಯಿಲೆಗಳಿಂದ ನರಳುತ್ತಿದ್ದರು ಎಂದು ಸಚಿವಾಲಯವು ತಿಳಿಸಿದೆ.







