ಅನಾಥ ಶವಗಳ ಪಾಲಿನ ಅಪತ್ಬಾಂಧವ ತುಮಕೂರಿನ ನಿಸಾರ್ ಬೇಗ ನಿಧನ

ತುಮಕೂರು, ಆ.23: ಅಪಘಾತದಲ್ಲಿ ಮೃತಪಟ್ಟವರು, ಕೋರೋನ ಸೋಂಕಿನಿಂದ ಸಾವನ್ನಪ್ಪಿದವರು ಹಾಗೂ ಅನಾಥ ಶವಗಳ ಸಂಸ್ಕಾರದಲ್ಲಿ ತೊಡಗಿದ್ದ ತುಮಕೂರಿನ ನಿಸಾರ್ ಬೇಗ್(67) ಶನಿವಾರ ನಿಧನರಾಗಿದ್ದಾರೆ.
ಲಾರಿ ಮಾಲಕರಾಗಿದ್ದ ನಿಸಾರ್ ಬೇಗ್ ಅಪಘಾತವೊಂದರಲ್ಲಿ ಗಾಯಗೊಂಡ ನಂತರ ಅಂಬುಲೆನ್ಸ್ ಡ್ರೈವರ್ ಆಗಿ ಬದುಕು ಸಾಗಿಸುತ್ತಿದ್ದರು. ಮೃತರನ್ನು ಸಾಗಿಸಲು ತುರ್ತುವಾಹನವೊಂದನ್ನು ದಾನವಾಗಿ ನೀಡಿದ್ದರು. ಅಪಘಾತದಲ್ಲಿ ಗಾಯಗೊಂಡವರು, ಇನ್ನಿತರ ಖಾಯಿಲೆಯಿಂದ ತುರ್ತು ಚಿಕಿತ್ಸೆ ಅಗತ್ಯವಿದ್ದವರನ್ನು ತಮ್ಮ ತುರ್ತು ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಕಾಯಕವನ್ನು ಹತ್ತಾರು ವರ್ಷಗಳ ಕಾಲ ನಿರಂತರವಾಗಿ ನಡೆಸಿಕೊಂಡು ಬಂದಿದ್ದರು.
ಇತ್ತೀಚಿಗೆ ಮಹಾಮಾರಿ ಕೋರೋನ ಸೋಂಕಿನಿಂದ ಮೃತಮಟ್ಟವರ ಶವ ಸಾಗಿಸಲು, ಶವಗಳ ಸಂಸ್ಕಾರಕ್ಕೂ ಕೈಜೊಡಿಸಿದ್ದ ನಿಸಾರ್ ಬೇಗ್, ಬಿಹಾರ, ಉತ್ತರ ಪ್ರದೇಶ್, ಗುಜರಾತ್, ಬಾಂಬೆವರೆಗೂ ಮೃತ ಶವಗಳನ್ನು ಸಾಗಿಸಿ, ಕುಟುಂಬಸ್ತರಿಗೆ ಹತ್ತಾಂತರಿಸುವ ಮಾದರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಮೃತ ನಿಸಾರ್ ಬೇಗ್ ಅವರ ಸೇವೆಯನ್ನು ಸ್ಮರಿಸಿರುವ ಕೋರೋನ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರದಲ್ಲಿ ತೊಡಗಿರುವ ಉದ್ಯಮಿ ತಾಜುದ್ದೀನ್ ಶರೀಫ್, ಬೇಗ್ ಅವರ ಮರಣ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಶೋಕ ವ್ಯಕ್ತಪಡಿಸಿದ್ದಾರೆ.







