ಬೆಂಗಳೂರು: ಮಹಿಳೆಯ ಕೊಲೆ ಪ್ರಕರಣಕ್ಕೆ ತಿರುವು; ಹತ್ಯೆಗೆ ಸುಪಾರಿ ನೀಡಿದ್ದ ಪತಿ, ಮಗ
ಆರೋಪಿಗಳ ಬಂಧನ

ಬೆಂಗಳೂರು, ಆ.23: ಪತ್ನಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ ಆರೋಪದಡಿ ಪತಿ, ಮಗ ಸೇರಿದಂತೆ ಹಲವರನ್ನು ಇಲ್ಲಿನ ಬಂಡೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗೀತಾ ಎಂಬಾಕೆ ಕೊಲೆಯಾದ ಮಹಿಳೆಯಾಗಿದ್ದು, ನಗರದ ನಿವಾಸಿಗಳಾದ ವರುಣ್, ನವೀನ್ ಕುಮಾರ್, ನಾಗರಾಜ್, ಪ್ರದೀಪ್, ನಾಗ ಹಾಗೂ ಆಂಜನಿ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.16ರ ಮುಂಜಾನೆ ಸುಮಾರಿಗೆ ಮನೆಯ ಮೇಲ್ಚಾವಣಿಯ ಶೀಟ್ ಅನ್ನು ಒಡೆದು ಗೀತಾ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಈ ವೇಳೆ ಸ್ಥಳದಲ್ಲೇ ಗೀತಾ ಸಾವನ್ನಪ್ಪಿದ್ದರು. ಈ ವೇಳೆ ತಡೆಯಲು ಬಂದ ಯುವಕನಿಗೆ ಕೂಡ ಗಾಯವಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದಾಗ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗೀತಾ ಅವರ ಜೊತೆ ಆಕೆಯ ಪತಿ ಆಂಜನಿ ಮತ್ತು ಮಗ ವರುಣ್ ಜಗಳವಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಪತ್ನಿಯನ್ನು ಕೊಲ್ಲುವಂತೆ ಮಗ ಹಾಗೂ ಪತಿಯೇ ಹಣದ ಆಮಿಷವೊಡ್ಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





