ಬೆಂಗಳೂರು ಹಿಂಸಾಚಾರ ಪ್ರಕರಣ: ಪೊಲೀಸರು ಗುಂಡು ಹಾರಿಸಿದ ಬಂದೂಕುಗಳು ಸಿಸಿಬಿ ವಶಕ್ಕೆ

ಬೆಂಗಳೂರು, ಆ.23: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಹಿಂಸಾಚಾರ ಪ್ರಕರಣ ಸಂಬಂಧ ಪೊಲೀಸರು ಗುಂಡು ಹಾರಿಸಿದ ಬಂದೂಕುಗಳನ್ನು ಸಿಸಿಬಿ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಡಿ.ಜೆ.ಹಳ್ಳಿ ಠಾಣಾ ಪೊಲೀಸರು ಬಳಸಿದ್ದ 17 ಎಸ್‍ಎಲ್‍ಆರ್ ಬಂದೂಕುಗಳನ್ನು ಸಿಸಿಬಿ ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವು ಪೊಲೀಸ್ ಇನ್‍ಸ್ಪೆಕ್ಟರ್ ಗಳ ಪಿಸ್ತೂಲ್‍ಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಕೆಎಸ್‍ಆರ್‍ಪಿ, ಸಿಎಆರ್ ಮತ್ತು ಡಿ.ಜೆ.ಹಳ್ಳಿ ಪೊಲೀಸರು ಬಳಸಿದ್ದ ಬಂದೂಕುಗಳು ಸಿಸಿಬಿ ತಾಂತ್ರಿಕ ತಂಡ ಪರಿಶೀಲನೆ ನಡೆಸಿದೆ. ಪಿಸ್ತೂಲ್‍ಗಳನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗುತ್ತದೆ. ಒಂದು ಮಾಹಿತಿ ಪ್ರಕಾರ 117 ಗುಂಡುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಐವರಿಗೆ ಕೊರೋನ ಸೋಂಕು ದೃಢ
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸದ್ಯ ಪೊಲೀಸರು 80 ಮಂದಿಯನ್ನು ಬಳ್ಳಾರಿ ಜೈಲಿಗೆ, ಇನ್ನುಳಿದ 226 ಮಂದಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದು, ಈ ಪೈಕಿ ಐವರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪರಪ್ಪನ ಅಗ್ರಹಾರದ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಜೈಲಿನ ನೂತನ ಕಟ್ಟಡದಲ್ಲಿ ಇರಿಸಿದ್ದಾರೆ. ಜೊತೆಗೆ ಆರೋಪಿಗಳನ್ನು ಯಾರೂ ಭೇಟಿಯಾಗುವಂತಿಲ್ಲ ಎಂದು ನಿಷೇಧ ವಿಧಿಸಿದ್ದಾರೆ.
ನವೀನ್‍ಗೆ ಪ್ರತ್ಯೇಕ ವ್ಯವಸ್ಥೆ: ಗಲಭೆಗೂ ಮುಂಚೆ ಪೊೀಸ್ಟ್ ಹಾಕಿದ ನವೀನ್‍ನನ್ನು ಸದ್ಯ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಹಲ್ಲೆ ನಡೆಯುವ ಭೀತಿಯಿಂದಾಗಿ ಈತನಿಗೆ ಜೈಲಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಠಾಣೆ ಸಂಪೂರ್ಣವಾಗಿ ಸ್ಯಾನಿಟೈಸೇಷನ್: ಘಟನೆ ಬೆಳಕಿಗೆ ಬಂದ ದಿನದಿಂದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣೆಗೆ ಹಲವಾರು ಭೇಟಿ ನೀಡಿರುವ ಹಿನ್ನೆಲೆ ಠಾಣೆ ಹಾಗೂ ಠಾಣೆಯ ಹೊರಭಾಗವನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಡಿಸಿಪಿ: ಡಿ.ಜೆ.ಹಳ್ಳಿ ಠಾಣೆಯಲ್ಲಿ ತನಿಖೆ ಬಿರುಸಿನಿಂದ ಸಾಗುತ್ತಿದ್ದು, ಮುಂಜಾನೆಯೇ ಪೂರ್ವ ವಿಭಾಗ ಡಿಸಿಪಿ ಡಾ.ಶರಣಪ್ಪ, ಠಾಣೆಗೆ ಬಂದಿದ್ದು, ಈ ವೇಳೆ, ತಡವಾಗಿ ಆಗಮಿಸಿದ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ. ಸಮಯಕ್ಕೆ ಬಾರದೇ ತಡವಾಗಿ ಬರುತ್ತೀರಿ. ಕೆಲಸದ ವೇಳೆ ಮೊಬೈಲ್ ಬಳಸುವ ಹಾಗಿಲ್ಲ. ಹೀಗೆ, ಮುಂದುವರಿದರೆ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.