ಕೋವಿಡ್19: ಕಾನೂನು ವಿವಿ ಸೆಮಿಸ್ಟರ್ ಪರೀಕ್ಷೆ ಕೈಬಿಡಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಆ.23: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕು ಉಲ್ಬಣಿಸುತ್ತಿರುವಾಗ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಪ್ರತಿಷ್ಠೆಗೆ ಅಂಟಿಕೊಳ್ಳದೆ ಸೆಮಿಸ್ಟರ್ ಪರೀಕ್ಷೆ ಕೈಬಿಡುವುದು ಒಳಿತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ರವಿವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ಸ್ಥಳೀಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪರೀಕ್ಷೆಯ ನಿರ್ಧಾರ ಕೈಗೊಳ್ಳುವಂತೆ ಯುಜಿಸಿ ತಿಳಿಸಿದೆ. ರಾಜ್ಯದಲ್ಲಿ ಕೊರೋನ ಸೋಂಕಿನಿಂದಾಗಿ ಬೋಧನಾ ತರಗತಿಗಳು ನಡೆಯದೆ ಅರ್ಧದಷ್ಟು ಪಠ್ಯಕ್ರಮವೇ ಪೂರ್ಣಗೊಂಡಿಲ್ಲ. ಹಿನ್ನೆಲೆಯಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ರಾಜ್ಯ ಕಾನೂನು ವಿಶ್ವವಿದ್ಯಾಲಯ ಕೈಬಿಟ್ಟು ವಿದ್ಯಾರ್ಥಿಗಳ ಹಿತ ಕಾಯಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಕೊರೋನ ಸೋಂಕಿನಿಂದಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸುವುದು ಸೂಕ್ತವಲ್ಲದ ಕಾರಣ ಕಾನೂನು ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು, ಅವರಿಗೆ ಅನುಕೂಲಕರವಾದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆಗೆ ಹಾಜರಾಗಲು ಕಾನೂನು ವಿಶ್ವವಿದ್ಯಾನಿಲಯ ಅವಕಾಶ ಮಾಡಿಕೊಡಬೇಕೆಂದು ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.





