ಕಂದಾವರ ಮಾರುಕಟ್ಟೆ ಅಂಗಡಿ ಕಾನೂನುಬಾಹಿರ ಏಲಂ: ಮೊಯ್ದಿನ್ ಬಾವಾ ಆರೋಪ

ಮಂಗಳೂರು, ಆ.24: ಕಂದಾವರ ಗ್ರಾಮ ಪಂಚಾಯತ್‌ನ ಸ್ಟಾಲ್/ ಮಾರುಕಟ್ಟೆ ವಾಣಿಜ್ಯ ಅಂಗಡಿಗಳನ್ನು ತಾಲೂಕು ಪಂಚಾಯತ್‌ನ ಕಾರ್ಯ ನಿರ್ವಹಣಾಧಿ ಕಾರಿಯ ಆದೇಶದ ಹೊರತಾಗಿಯೂ ಕಾನೂನುಬಾಹಿರವಾಗಿ ಏಲಂ ಮಾಡಲಾಗಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಾರುಕಟ್ಟೆಯ ವಾಣಿಜ್ಯ ಅಂಗಡಿಗಳಿಗಾಗಿ ಟೆಂಡರ್ ಕರೆಯಲಾಗಿದ್ದರೂ ಈ ನಡುವೆ ಸ್ಥಳೀಯ ಶಾಸಕರ ಒತ್ತಡದ ಮೇರೆಗೆ ಏಲಂ ಮಾಡಿ ಕಾನೂನು ಉಲ್ಲಂಘಿಸಿ, ನ್ಯಾಯಾಂಗ ನಿಂದನೆಯನ್ನೂ ಮಾಡಿದ್ದಾರೆ ಎಂದು ಆರೋಪಿಸಿದರು.
ಕಂದಾವರ ಗ್ರಾ.ಪಂ. ನ ಅಭಿವೃದ್ದಿ ಅಧಿಕಾರಿಯವರು ನಿರ್ಣಯ ನಂ. 840/2019ರ ದಿನಾಂಕ 22.08.2019ರಂತೆ ವಾಣಿಜ್ಯ ಅಂಗಡಿಗಳನ್ನು ಟೆಂಡರ್ ಮೂಲಕ 12 ತಿಂಗಳ ನಂತರ ಟೆಂಡರ್ ಕರೆಯಲು ಪತ್ರಿಕಾ ಪ್ರಕಟನೆ ನೀಡಿದ್ದರು. ಆದರೆ ಈ ನಿರ್ಣಯ ಅಸಿಂಧು ಎಂದು ಸ್ಟಾಲ್ ಬಾಡಿಗೆದಾರರೊಬ್ಬರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ಸ್ಥಳೀಯ ಕಾರ್ಯ ನಿರ್ವಹಣಾಧಿಕಾರಿ ಪರಿಶೀಲಿಸಿ ಆ.21ರ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ತಡೆ ಯಾಜ್ಞೆಯನ್ನು ನೀಡಿದ್ದರು. ತಡೆಯಾಜ್ಞೆಯನ್ನು ಈಮೇಲ್ ಮೂಲಕ ಸ್ಥಳೀಯ ಅಧಿಕಾರಿಗಳಿಗೆ ಕಳುಹಿಸಿದ್ದರು. ಸ್ಟಾಲ್ ಬಾಡಿಗೆದಾರರು ಬಜಪೆ ಪೊಲೀಸ್ ಅಧಿಕಾರಿಗೂ ದೂರು ನೀಡಿದ್ದರು. ಆದರೆ ಆ. 21ರಂದು ಕಂದಾಯ ಪಂಚಾಯತ್‌ನ ಅಧಿಕಾರಿಗಳು ಟೆಂಡರ್ ಜಾರಿ ಮಾಡಲು ಬಂದಾಗ ಸಾರ್ವಜನಿಕರ ಉಹಾಗೂ ಸ್ಟಾಲ್ ಹೊಂದಿದ್ದವರು ಪ್ರತಿಭಟಿಸಿದ್ದರು. ಆ ಸಂದರ್ಭ ಸ್ಥಳಕ್ಕಾಗಮಿಸಿ ಗ್ರಾಮಾಧಿಕಾರಿಗೆ ಗಡಿ ಗುರುತು ಆದ ನಂತರವೇ, ಆಗಸ್ಟ್ 25ರ ನಂತರ ನ್ಯಾಯಾಲಯದ ಆದೇಶದಂತೆ ಮುಂದುವರಿಯಲು ಸೂಚಿಸಿ ಲಿಖಿತವಾಗಿ ದೃಢೀಕರಿಸಿದ್ದರು. ಆದರೆ ಇಒ ಆದೇಶ ಪತ್ರದ ಕೆಳ ಭಾಗದಲ್ಲಿ ಗ್ರಾಮಾಧಿಕಾರಿ, ಆಡಳಿತಾಧಿಕಾರಿ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಹಿ ಹಾಕಿ ಇಒ ಮೌಖಿಕವಾಗಿ ಆದೇಶಿಸಿದ್ದಾರೆಂದು ಸುಳ್ಳು ದಾಖಲೆ ಸೃಷ್ಟಿಸಿ ಏಲಂ ಮಾಡಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೂ ದೂರು ನೀಡಲಾಗಿದೆ ಎಂದು ಮೊಯ್ದಿನ್ ಬಾವಾ ಹೇಳಿದರು.
ಇದು ಒಂದು ಉದಾಹರಣೆ ಮಾತ್ರ. ಈ ರೀತಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿ ಕಾನೂನು ಕೈಗೆತ್ತಿಕೊಳ್ಳುವಂತಹ ಪ್ರಕ್ರಿಯೆಯನ್ನು ಬಿಜೆಪಿಯ ಜನಪ್ರತಿ ನಿಧಿಗಳು ತಮ್ಮ ಕ್ಷೇತ್ರದಲ್ಲಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಮೊಯ್ದಿನ್ ಬಾವಾ, ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಕಂದಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿಜಯ ಸುವರ್ಣ, ಸದಸ್ಯರಾದ ಸಚಿನ್, ಸುನಿಲ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರಂದ್ರ ಕಾಂಬ್ಳಿ, ಯು.ಪಿ. ಇಬ್ರಾಹೀಂ ಉಪಸ್ಥಿತರಿದ್ದರು.







