ಪತ್ರ ಬರೆದ ನಾಯಕರನ್ನು ರಾಹುಲ್ ಟೀಕಿಸಿದ್ದಾರೆ ಎನ್ನುವುದು ಸುಳ್ಳು: ಸುರ್ಜೆವಾಲಾ ಸ್ಪಷ್ಟನೆ
ಟ್ವೀಟ್ ಅಳಿಸಿ ಹಾಕಿದ ಕಪಿಲ್ ಸಿಬಲ್

ಹೊಸದಿಲ್ಲಿ, ಆ.24: ಕಾಂಗ್ರೆಸ್ ನಾಯಕತ್ವದ ಬದಲಾವಣೆಗೆ ಆಗ್ರಹಿಸಿ ಹೈಕಮಾಂಡ್ ಗೆ ಪತ್ರ ಬರೆದಿರುವ ಉನ್ನತ ನಾಯಕರು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್ ಪಕ್ಷ, ದಯವಿಟ್ಟು ಸುಳ್ಳು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸಬೇಡಿ ಎಂದು ವಿನಂತಿಸಿಕೊಂಡಿದೆ.
ಪಕ್ಷದ ಕೆಲವು ಹಿರಿಯ ಮುಖಂಡರು ಬಿಜೆಪಿಗೆ ನೆರವಾಗಲು ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ ಎಂದು ರಾಹುಲ್ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಹಿರಿಯ ನಾಯಕ ಕಪಿಲ್ ಸಿಬಲ್ ಖಾರವಾಗಿ ಟ್ವೀಟ್ ಮಾಡಿದ್ದರು. ಇದರಿಂದ ತಕ್ಷಣವೇ ಎಚ್ಚತ್ತುಕೊಂಡ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, "ರಾಹುಲ್ ಗಾಂಧಿ ಈ ರೀತಿಯ ಮಾತನ್ನು ಹೇಳಿಲ್ಲ ಹಾಗೂ ಸೂಚಿಸಿಲ್ಲ. ಸುಳ್ಳು ಹಾಗೂ ತಪ್ಪು ಮಾಹಿತಿಯ ಮೂಲಕ ತಪ್ಪು ದಾರಿಗಳೆಯಬೇಡಿ. ಹೌದು ಮೋದಿ ಆಡಳಿತದ ವಿರುದ್ಧ ಹೋರಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ'' ಎಂದು ಟ್ವೀಟಿಸಿದ್ದಾರೆ.
ಇದೇ ವೇಳೆ ತನ್ನ ಟ್ವೀಟನ್ನು ಅಳಿಸಿ ಹಾಕಿರುವ ಹಿರಿಯ ವಕೀಲರೂ ಆಗಿರುವ ಸಿಬಲ್, ತಾನು ನಿಮ್ಮ ಕುರಿತು ಏನನ್ನೂ ಹೇಳಿಲ್ಲ ಎಂದು ರಾಹುಲ್ ಗಾಂಧಿ ನನಗೆ ಮಾಹಿತಿ ನೀಡಿದ್ದಾರೆ . ಹೀಗಾಗಿ ನಾನು ಟ್ವೀಟನ್ನು ಹಿಂಪಡೆದುಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.





