ಪ್ರಧಾನಿ ಮೋದಿ ತಂದೆಯ ಟೀ ಸ್ಟಾಲ್ ಕುರಿತು ಯಾವುದೇ ದಾಖಲೆ ರೈಲ್ವೆ ಬಳಿ ಇಲ್ಲ: ಆರ್ ಟಿಐಯಿಂದ ಬಹಿರಂಗ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ದಾಮೋದರ್ ದಾಸ್ ಅವರದ್ದು ಎನ್ನಲಾದ ಟೀ ಸ್ಟಾಲ್ ಕುರಿತು ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಆರ್ ಟಿಐ ಅರ್ಜಿಯನ್ನು ಕೇಂದ್ರ ಮಾಹಿತಿ ಆಯೋಗ ಯಾವುದೇ ಮಾಹಿತಿ ನೀಡದೆ ವಿಲೇವಾರಿಗೊಳಿಸಿದೆ. ಈ ಕುರಿತಾದ ಯಾವುದೇ ದಾಖಲೆ ಅಹ್ಮದಾಬಾದ್ ರೈಲ್ವೆ ವಿಭಾಗದಲ್ಲಿ ಇಲ್ಲ ಹಾಗೂ ಕೇಳಲಾದ ಮಾಹಿತಿ ಬಹಳಷ್ಟು ಹಳೆಯದು ಎಂದು ಆಯೋಗ ಹೇಳಿದೆ.
ಆರ್ ಟಿಐ ಕಾರ್ಯಕರ್ತ ಹಾಗೂ ವಕೀಲ ಪವನ್ ಪಾರಿಖ್ ಅವರು ಸಲ್ಲಿಸಿದ್ದ ಎರಡನೇ ಅಪೀಲು ಇದಾಗಿದೆ. ಎರಡು ವರ್ಷಗಳ ಹಿಂದೆ ಪಶ್ಚಿಮ ರೈಲ್ವೆಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅವರು ಆರ್ ಟಿಐ ಅರ್ಜಿ ಸಲ್ಲಿಸಿ ಪ್ರಧಾನಿಯ ತಂದೆಗೆ ಟೀ ಸ್ಟಾಲ್ ತೆರೆಯಲು ನೀಡಲಾದ ಲೈಸನ್ಸಿನ ಕುರಿತಾದ ದಾಖಲೆಗಳನ್ನು ಕೇಳಿದ್ದರು. ಆದರೆ ಯಾವುದೇ ಮಾಹಿತಿ ದೊರೆಯದೇ ಇದ್ದಾಗ ಕೇಂದ್ರ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಆದರೆ ಪಾರಿಖ್ ಅವರು ಎರಡನೇ ಅಪೀಲು ಸಲ್ಲಿಸಿದಾಗ ತನಗೆ ಇಂತಹ ಯಾವುದೇ ಆರ್‍ಟಿಐ ಅರ್ಜಿ ದೊರೆತಿಲ್ಲ ಎಂದು ಆಯೋಗ ಹೇಳಿತ್ತು.
ಮೋದಿ ಅವರು ಚಿಕ್ಕಂದಿನಲ್ಲಿ ರೈಲ್ವೆ ಪ್ಲಾಟ್ ಫಾರ್ಮ್‍ಗಳಲ್ಲಿ ಅಥವಾ ರೈಲುಗಳಲ್ಲಿ ಟೀ ಮಾರಾಟಗಾರರಾಗಿದ್ದರೆಂಬುದಕ್ಕೆ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು 2015ರಲ್ಲಿ ಸಲ್ಲಿಕೆಯಾಗಿದ್ದ ಆರ್ ಟಿಐ ಅರ್ಜಿಗೆ ದೊರೆತ ಉತ್ತರದಿಂದ ತಿಳಿದು ಬಂದಿತ್ತು. ಈ ಅರ್ಜಿಯನ್ನು ಕಾಂಗ್ರೆಸ್ ಕಾರ್ಯಕರ್ತ ಹಾಗೂ ಆರ್‍ಟಿಐ ಹೋರಾಟಗಾರ ತೆಹ್ಸೀನ್ ಪೂನಾವಾಲ ಸಲ್ಲಿಸಿದ್ದರು.





