ಚಿಕ್ಕಮಗಳೂರು: ಭದ್ರಾ ನಾಲೆಗೆ ಉರುಳಿ ಬಿದ್ದ ಕಾರು; ಮಹಿಳೆ ಮೃತ್ಯು

ಚಿಕ್ಕಮಗಳೂರು, ಆ.24: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಕಾರು ಭದ್ರಾ ನಾಲೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ದಂಪತಿ ಪೈಕಿ ಮಹಿಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಕಾರಿನಲ್ಲಿದ್ದ ಸರ್ವಮಂಗಳ (32) ನಾಲೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸರ್ವಮಂಗಳ ಅವರ ಪತಿ ಸಂತೋಷ್ ಜೈನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಸೋಮವಾರ ಮಧ್ಯಾಹ್ನ ಲಕ್ಕವಳ್ಳಿ ಸಮೀಪದ ಗ್ರಾಮವೊಂದರಿಂದ ಲಕ್ಕವಳ್ಳಿಗೆ ಸರ್ವಮಂಗಳ, ಸಂತೋಷ್ ಜೈನ್ ದಂಪತಿ ಬೊಲೆರೋ ಕಾರಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಲಕ್ಕವಳ್ಳಿ ಪಟ್ಟಣ ಸಮೀಪದಲ್ಲಿರುವ ಭದ್ರಾ ಎಡದಂಡೆ ನಾಲೆ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿ ಬಿದ್ದಿದೆ. ನಾಲೆಯಲ್ಲಿ ನೀರು ಹರಿಯುತ್ತಿದ್ದರಿಂದ ಕಾರು ನೀರಿನಲ್ಲಿ ತೇಲಿಕೊಂಡು ಸ್ವಲ್ಪ ದೂರಕ್ಕೆ ಹೋಗಿದೆ.
ಈ ವೇಳೆ ಸಂತೋಷ್ ಜೈನ್ ಕಾರಿನಿಂದ ಹೊರ ಬಂದು ಈಜಿ ದಡ ಸೇರಿದ್ದಾರೆ. ಆದರೆ ಸಂತೋಷ್ ಅವರ ಪತ್ನಿ ಸರ್ವಮಂಗಳ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸರ್ವ ಮಂಗಳ ಅವರ ಮೃತದೇಹವನ್ನು ಮುಳುಗು ತಜ್ಞರು ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಹುಡುಕಾಟ ನಡೆಸಿ ಹೊರತಂದಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತೋಷ್ ಜೈನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಘಟನೆ ಸಂಬಂಧ ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.








