ರಕ್ಷಾ ಸಾವಿನ ಪ್ರಕರಣದ ತನಿಖೆ ಸಿಒಡಿಗೆ ನೀಡಿ ಗೃಹ ಸಚಿವರ ಆದೇಶ: ರಘುಪತಿ ಭಟ್

ಉಡುಪಿ, ಆ.24: ಇತ್ತೀಚೆಗೆ ಖಾಸಗಿ ಆಸ್ಪತ್ರೆಯ ಚಿಕಿತ್ಸೆಯ ಬಳಿಕ ಸಂಶ ಯಾಸ್ಪದವಾಗಿ ಮೃತಪಟ್ಟ ಬಿಜೆಪಿ ಯುವ ಮೋರ್ಚಾ ನಗರ ಕಾರ್ಯದರ್ಶಿ, ಇಂದಿರಾನಗರದ ಶಿವಪ್ರಸಾದ್ ಪತ್ನಿ ರಕ್ಷಾ ಸಾವಿನ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಆರೋಗ್ಯ ಇಲಾಖೆಗೆ ಸಂಬಂಧ ಉಡುಪಿ ಜಿಲ್ಲೆಯಲ್ಲಿ ನಡೆದ ಘಟನೆಗಳ ಬಗ್ಗೆ ಗೃಹ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಆ.24ರಂದು ಶಾಸಕರು, ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಈ ಆದೇಶ ಹೊರಡಿಸಿರುವುದಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ವೀಡಿಯೊ ಕಾನ್ಫರೆನ್ಸ್ ಬಳಿಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಶಾಸಕರು ಈ ಬಗ್ಗೆ ಮಾಹಿತಿ ನೀಡಿದರು. ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ರಕ್ಷಾ ಮೃತಪಟ್ಟಿರುವ ಬಗ್ಗೆ ಸಂಶಯ ಇದ್ದು, ಈ ಕುರಿತು ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತದೆ ಎಂದರು.
ಮೃತದೇಹ ಹಸ್ತಾಂತರಕ್ಕೆ ಸೂತ್ರ: ಕೊರೋನ ಸೋಂಕಿತರ ಮೃತದೇಹದ ಅದಲು ಬದಲು ಪ್ರಕರಣದ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಹೊಸ ಸೂತ್ರವನ್ನು ರಚಿಸಲಾಗಿದೆ ಎಂದು ರಘುಪತಿ ಭಟ್ ತಿಳಿಸಿದರು.
ಕೋವಿಡ್ ಮೃತದೇಹ ಪಡೆಯುವಾಗ ಆಯಾ ಪ್ರದೇಶದ ಆರೋಗ್ಯ ಅಧಿಕಾರಿ ಸ್ಥಳದಲ್ಲಿ ಇದ್ದು ಪರಿಶೀಲಿಸಿ ಪಡೆಯಬೇಕು. ಈ ವೇಳೆ ಕುಟುಂಬದ ವರಿಗೆ ಮೃತದೇಹವನ್ನು ತೋರಿಸಿ ದೃಢೀಕರಿಸಿಕೊಳ್ಳಬೇಕು. ಸಂಜೆ 6ರಿಂದ ಬೆಳಗ್ಗೆ 9 ಗಂಟೆವರೆಗೆ ಯಾವುದೇ ಮೃತದೇಹವನ್ನು ಬಿಟ್ಟು ಕೊಡಬಾರದು. ಮೃತ ದೇಹ ಬಿಟ್ಟುಕೊಡುವ ಜವಾಬ್ದಾರಿ ವೈದ್ಯರಿಗೆ ಇರಬೇಕು ಎಂಬ ನಿರ್ಣಯ ಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೋವಿಡ್ ಪರೀಕ್ಷೆಯಲ್ಲಿ ಗೋಲ್‌ಮಾಲ್, ಕಮಿಷನ್ ದಂಧೆ, ಭ್ರಷ್ಟಾಚಾರ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದೆಲ್ಲ ಸತ್ಯಕ್ಕೆ ದೂರ ವಾದುದು. ಇದರಲ್ಲಿ ಯಾವುದೇ ಭ್ರಷ್ಟಾಚಾರಗಳು ನಡೆಯುತ್ತಿಲ್ಲ. ಇದು ಕೇವಲ ಅಪಪ್ರಚಾರ. ಆದುದರಿಂದ ಜನ ಇದನ್ನು ನಂಬಬಾರದು ಎಂದು ಅವರು ವಿನಂತಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಮುಖಂಡರಾದ ವೀಣಾ ಶೆಟ್ಟಿ, ಸರೋಜ ಶೆಟ್ಟಿಗಾರ್, ಮಹೇಶ್ ಠಾಕೂರ್ ಮೊದಲಾದವರು ಉಪಸ್ಥಿತರಿದ್ದರು.
ಸಮಗ್ರ ತನಿಖೆಗೆ ಮೆಡಿಕಲ್ ಬೋರ್ಡ್ ರಚನೆ
ರಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಆರೋಗ್ಯದ ಸಮಸ್ಯೆ, ಖಾಸಗಿ ಆಸ್ಪತ್ರೆಯ ಚಿಕಿತ್ಸೆ ಹಾಗೂ ಕೊರೋನ ವರದಿಯಲ್ಲಿನ ಗೊಂದಲ ಬಗ್ಗೆ ಸಮಗ್ರ ತನಿಖೆ ನಡೆಸಲು ಏಳು ಮಂದಿ ತಜ್ಞರ ಮೆಡಿಕಲ್ ಬೋರ್ಡ್ ರಚಿಸಿ ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ಆದೇಶ ನೀಡಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು.
ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಅಡಿಗ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಅಜಿತ್ ಶೆಟ್ಟಿ, ಡಾ.ಉದಯ ಶಂಕರ್, ಡಾ.ರಾಮರಾವ್, ಐಎಂಎ ಅಧ್ಯಕ್ಷ ಡಾ.ಉಮೇಶ್ ಪ್ರಭು, ಕೆಎಂಸಿಯ ಪ್ರೊ.ಡಾ.ಸ್ಮಿತಾ ಶೆಣೈ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ತನಿಖೆ ನಡೆಸಿ ಐದು ದಿನಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.







