ಬೆಂಗಳೂರು ಹಿಂಸಾಚಾರ ಪ್ರಕರಣ: ಪ್ರಮುಖರ ಹೇಳಿಕೆ ದಾಖಲಿಸಿಕೊಂಡ ಸಿಸಿಬಿ

ಬೆಂಗಳೂರು, ಆ.24: ಡಿಜೆ-ಕೆಜಿ ಹಳ್ಳಿ ಹಿಂಸಾಚಾರ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ತನಿಖಾಧಿಕಾರಿಗಳು, ಸ್ಥಳೀಯ ಸಂಘಟನೆಯ ಪ್ರಮುಖರು ಹಾಗೂ ಬಿಬಿಎಂಪಿ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ.
ಬಿಬಿಎಂಪಿ ಸದಸ್ಯರಾದ ಸಂಪತ್ ರಾಜ್, ಎ.ಆರ್.ಝಾಕೀರ್ ಬಳಿಕ ಸೋಮವಾರ ಇಲ್ಲಿನ ಮುನೇಶ್ವರ ವಾರ್ಡಿನ ಸದಸ್ಯೆ ಸಾಜಿದಾ ಅವರ ಪತಿ ನಾಸೀರ್ ಅವರನ್ನು ವಿಚಾರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡರು.
ಈ ಬಗ್ಗೆ ಮಾಹಿತಿ ನೀಡಿದ ನಾಸೀರ್, ಸಿಸಿಬಿ ಅಧಿಕಾರಿಗಳ ಎಲ್ಲ ಪ್ರಶ್ನೆಗೆ ಉತ್ತರ ನೀಡಿದ್ದು, ನನ್ನ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಬಂಧಿತನಾಗಿರುವ ಮುಝಾಮಿಲ್ ಪಾಷಾ ಸೇರಿದಂತೆ ಇನ್ನಿತರರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನುಡಿದರು.
ಎಸ್‍ಡಿಪಿಐ ಮುಖಂಡ ಮುಝಾಮಿಲ್ ಪಾಷಾ, ಸ್ಥಳೀಯ ಬಿಬಿಎಂಪಿ ಸದಸ್ಯರು, ಕೆಲ ಸಂಘಟನೆಗಳ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದ. ಆತನ ಮೊಬೈಲ್‍ನಲ್ಲಿದ್ದ ಮಾಹಿತಿಯಂತೆ ಕೆಲವರಿಗೆ ನೋಟಿಸ್ ನೀಡಿ, ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಬಂಧನ: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಡಿ ಮತ್ತಿಬ್ಬರು ಆರೋಪಿಗಳನ್ನು ಪೂರ್ವವಿಭಾಗದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತನಿಖಾಕಾರಿಗಳು ಅವರುಗಳನ್ನು ಗೌಪ್ಯಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿ ಅಂದಿನ ಗಲಭೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎಫ್‍ಐಆರ್ ಸಂಖ್ಯೆ ಏರಿಕೆ
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಂಧಿತರ ಸಂಖ್ಯೆ ಜೊತೆಗೆ ಎಫ್‍ಐಆರ್ ಏರಿಕೆಯಾಗುತ್ತಿದ್ದು, ಇಲ್ಲಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ 80 ಎಫ್‍ಐಆರ್ ಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.







