ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ಕೊರೋನದಿಂದ ಮೃತಪಟ್ಟ ಮಹಿಳೆಯ ಚಿನ್ನದ ಸರ ಕಳ್ಳತನ; ಕುಟುಂಬಸ್ಥರ ಆರೋಪ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಆ.24: ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ಮಹಿಳೆಯೊಬ್ಬರ ಚಿನ್ನಾಭರಣ ಕಳ್ಳತನವಾಗಿದೆ ಎನ್ನಲಾದ ಘಟನೆ ವರದಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಗರದ ತೇಗೂರು ಗ್ರಾಮದ ಮಹಿಳೆ ಪ್ರೇಮಕುಮಾರಿ ಎಂಬವರು ಕೊರೋನ ಸೋಂಕಿಗೆ ತುತ್ತಾಗಿದ್ದರು. ಈ ಮಹಿಳೆಯನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಕೊರೋನ ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಿದ್ದ ಆರೋಗ್ಯ ಇಲಾಖೆಯ ವೈದ್ಯರು ಅಲ್ಲಿಯೇ ಚಿಕಿತ್ಸೆ ನೀಡುತ್ತಿದ್ದರು. ಆದರೆ ಆ.11ರಂದು ರಾತ್ರಿ 11.45ಕ್ಕೆ ಈ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯ ಐಸಿಯುನಲ್ಲೇ ಮೃತಪಟ್ಟಿದ್ದರು. ಮಹಿಳೆ ಮೃತಪಟ್ಟ ದಿನದಂದು ಆಕೆಯ ಕುತ್ತಿಗೆಯಲ್ಲಿ 50 ಗ್ರಾಂ ತೂಕದ ಸುಮಾರು 2 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಇತ್ತೆಂದು ಮೃತ ಮಹಿಳೆಯ ಪತಿ ಹಾಗೂ ಮಕ್ಕಳು ಹೇಳುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಈ ಸರವನ್ನು ಕುಟುಂಬಸ್ಥರಿಗೆ ನೀಡದೇ ಕಳ್ಳತನ ಮಾಡಿದ್ದಾರೆಂದು ಆರೋಪಿಸಿರುವ ಕುಟುಂಬಸ್ಥರು ಈ ಸಂಬಂಧ ಡಿಎಚ್ಒ ಹಾಗೂ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.
ಆದರೆ ಘಟನೆ ನಡೆದು ಎರಡು ವಾರ ಕಳೆಯುತ್ತಿದ್ದರೂ ಈ ಸಂಬಂಧ ನಗರ ಠಾಣೆಯ ಪೊಲೀಸರು ಎಫ್ಐಆರ್ ಅನ್ನೇ ದಾಖಲಿಸಿಕೊಂಡಿಲ್ಲ ಎಂದು ಪ್ರೇಮಕುಮಾರಿ ಅವರ ಪತಿ ಹಾಗೂ ಮಕ್ಕಳು ಆರೋಪಿಸಿದ್ದಾರೆ. ಮಾಂಗಲ್ಯ ಸರ ಕಳ್ಳತನದ ಬಗ್ಗೆ ಪೊಲೀಸ್ ಠಾಣೆಗೆ ಡಿಎಚ್ಒ ದೂರು ನೀಡಿದ್ದು, ಬೇರೆ ದೂರಿನ ಆವಶ್ಯಕತೆ ಇಲ್ಲ. ಡಿಎಚ್ಒ ದೂರಿನ ಮೇರೆಗೆ ತನಿಖೆ ಕೈಗೊಳ್ಳುತ್ತೇವೆ, ಆಸ್ಪತ್ರೆಯ ಕೆಲ ಸಿಬ್ಬಂದಿ ಮೇಲೆ ಗುಮಾನಿ ಇದ್ದು, ತನಿಖೆ ಮಾಡುತ್ತೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಇದುವರೆಗೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಆ.11ರಂದು ಪ್ರೇಮಕುಮಾರಿ ಮೃತಪಡುವುದಕ್ಕೂ ಮುನ್ನ ಆಕೆಯ ಕುತ್ತಿಗೆಯಲ್ಲಿ ಚಿನ್ನದ ಸರ ಇತ್ತು ಎನ್ನುವ ಪ್ರೇಮಕುಮಾರಿ ಕುಟುಂಬದವರು ಈ ಸಂಬಂಧ ಪೊಟೊವೊಂದನ್ನು ಸಾಕ್ಷ್ಯವಾಗಿ ಆರೋಗ್ಯ ಇಲಾಖೆ ಹಾಗೂ ಪೊಲೀಸರಿಗೆ ನೀಡಿದ್ದು, ಆಸ್ಪತ್ರೆಯ ಸಿಬ್ಬಂದಿ ಪ್ರೇಮಕುಮಾರಿ ಮೃತಪಟ್ಟ ನಂತರ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಅಂದು ಕರ್ತವ್ಯ ನಿರ್ವಹಿಸಿದ್ದ ರಾತ್ರಿ ಪಾಳಿಯ ಓರ್ವ ವೈದ್ಯ ಸೇರಿದಂತೆ ಓರ್ವ ಸ್ಟಾಪ್ ನರ್ಸ್, ಹೌಸ್ಕೀಪಿಂಗ್ ಸಿಬ್ಬಂದಿ ಹಾಗೂ ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರ ಮಾಡಿದ ನಾಲ್ವರು ಸಿಬ್ಬಂದಿ ಮೇಲೆ ಮೃತ ಸೋಂಕಿತ ಮಹಿಳೆ ಪ್ರೇಮಕುಮಾರಿಯ ಪತಿ ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಅಂದು ಆಸ್ಪತ್ರೆಯ ಐಸಿಯು ಕೊಠಡಿ ಬಳಿ ಇಬ್ಬರು ಸಿಬ್ಬಂದಿ ಅನುಮಾನಾಸ್ಪದವಾಗಿ ತಿರುಗಾಡಿರುವ ದೃಶ್ಯಾವಳಿ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಆರೋಪಿಸಿದ್ದಾರೆ.
ಈ ದೂರುಗಳ ಮೇರೆಗೆ ಡಿಎಚ್ಒ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ಮಾಡಿದ್ದು, ಸಿಬ್ಬಂದಿ ಚಿನ್ನದ ಸರದ ಯಾವುದೇ ಮಾಹಿತಿ ಇಲ್ಲ, ನಾವು ಕಳ್ಳತನ ಮಾಡಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಎಚ್ಒ ಖುದ್ದು ಪೊಲೀಸರಿಗೆ ದೂರು ನೀಡಿ ತನಿಖೆ ಆಗ್ರಹಿಸಿದ್ದಾರೆಂದು ತಿಳಿದು ಬಂದಿದೆ. ಆದರೆ ಪೊಲೀಸರು 10 ದಿನ ಕಳೆದರೂ ಮಾಂಗಲ್ಯ ಸರ ಕಳ್ಳತನದ ಬಗ್ಗೆ ಯಾವುದೇ ದೂರು ದಾಖಲಿಕೊಂಡಿಲ್ಲ, ತನಿಖೆಯನ್ನೂ ಮಾಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸದ್ಯ ಮಹಿಳೆಯ ಪತಿ ಹಾಗೂ ಮಕ್ಕಳಿಗೂ ಕೊರೋನ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ಇವರು ಹೋಮ್ ಐಸೋಲೇಶನ್ ಆಗಿರುವುದರಿಂದ ಪ್ರೇಮಕುಮಾರಿ ಅವರ ಚಿನ್ನದ ಮಾಂಗಲ್ಯ ಸರ ಕಳ್ಳತನದ ಬಗ್ಗೆ ಹೋರಾಟ ಮಾಡಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆಂದು ತಿಳಿದು ಬಂದಿದೆ. ಸದ್ಯ ಪ್ರೇಮಕುಮಾರಿ ಅವರ ತಿಥಿ ಕಾರ್ಯ ಮಾಡಲು ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದು, ಈ ಕಾರ್ಯ ಮಾಡಲು ಮಾಂಗಲ್ಯ ಸರದ ಅವಶ್ಯಕತೆ ಇದೆ. ಆದರೆ ಕಳ್ಳತನವಾಗಿರುವ ಸರದ ಪತ್ತೆಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
''ಆಸ್ಪತ್ರೆಯಲ್ಲೇ ಆಭರಣ ಇಟ್ಟು ಹೋದರು"
ಮೃತ ಮಹಿಳೆಯ ಸಂಬಂದಿಗಳು ಪ್ರೇಮಕುಮಾರಿ ಮೃತದೇಹದಲ್ಲಿದ್ದ ಮಾಂಗಲ್ಯ ಸರ ಹಾಗೂ ಉಂಗುರವೊಂದು ಕಳ್ಳತನವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಗರ ಠಾಣೆಗೆ ದೂರು ನೀಡಿದ್ದೇವೆ. ಪೊಲೀಸರು ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಯಾರು ಮಾಡಿದ್ದಾರೆಂದು ಪೊಲೀಸರೇ ಪತ್ತೆ ಹಚ್ಚಬೇಕು. ಸೋಮವಾರ ಸಂಜೆ ವೇಳೆ ಚಿನ್ನದ ಮಾಂಗಲ್ಯ ಸರ ಹಾಗೂ ಉಂಗುರವಿದ್ದ ಪರ್ಸ್ ವೊಂದನ್ನು ಆಸ್ಪತ್ರೆಯಲ್ಲಿ ಯಾರೋ ಇಟ್ಟು ಹೋಗಿದ್ದಾರೆ. ಕಳ್ಳತನ ಮಾಡಿದ್ದವರು ಯಾರು? ಮತ್ತೆ ಸರ, ಉಂಗುರವನ್ನು ಆಸ್ಪತ್ರೆಯಲ್ಲೇ ತಂದಿಟ್ಟವರು ಯಾರು? ತಿಳಿದು ಬಂದಿಲ್ಲ. ಆಭರಣಗಳನ್ನು ಪೊಲೀಸರಿಗೊಪ್ಪಿಸಲಾಗಿದೆ. ಇಟ್ಟು ಹೋಗಿದ್ದ ಆಭರಣ ದೂರು ಹೇಳಿಕೊಂಡವರಿಗೆ ಸೇರಿದ್ದಾಗಿದ್ದರೆ ಮಹಿಳೆಯ ಸಂಬಂಧಿಗಳಿಗೆ ಅದನ್ನು ಪೊಲೀಸರು ಹಸ್ತಾಂತರ ಮಾಡಲಿದ್ದಾರೆ. ಅನಾಮಧೇಯ ವ್ಯಕ್ತಿಗಳು ಆಸ್ಪತ್ರೆಯಲ್ಲಿ ತಂದಿಟ್ಟು ಹೋಗಿರುವ ಆಭರಣಗಳು ಪ್ರೇಮಕುಮಾರಿಗೆ ಸೇರಿದ್ದೇ ಎಂಬುದನ್ನು ಪೊಲೀಸರು ಖಚಿತಪಡಿಸಬೇಕಿದೆ.
- ಮೋಹನ್ ಕುಮಾರ್, ಜಿಲ್ಲಾ ಸರ್ಜನ್







