ವಿದೇಶಿ ಕಂಪೆನಿಗಳು ತಮ್ಮ ದೇಶದಲ್ಲಿ ಕಾರ್ಖಾನೆ ನಿರ್ಮಿಸುವ ಬಗ್ಗೆ ಶೇ. 62 ಭಾರತೀಯರಿಗೆ ಒಲವು
ಪೀವ್ ರಿಸರ್ಚ್ ಸೆಂಟರ್ನ ಸಮೀಕ್ಷೆ

Photo: twitter.com/pewresearch/header_photo
ಹೊಸದಿಲ್ಲಿ, ಆ. 24: ವಿದೇಶಿ ಕಂಪೆನಿಗಳು ತಮ್ಮ ದೇಶದಲ್ಲಿ ಕಾರ್ಖಾನೆ ನಿರ್ಮಿಸುವ ಬಗ್ಗೆ ಶೇ. 62 ಭಾರತೀಯರು ಒಲವು ಹೊಂದಿದ್ದಾರೆ. ಆದರೆ, ವಿದೇಶಿ ಕಂಪೆನಿಗಳು ದೇಶೀಯ ಕಂಪೆನಿಗಳನ್ನು ಖರೀದಿಸುವ ಬಗ್ಗೆ ಕೇವಲ ಶೇ. 43 ಭಾರತೀಯರು ಮಾತ್ರ ಒಲವು ವ್ಯಕ್ತಪಡಿಸಿದ್ದಾರೆ ಎಂದು ಪೀವ್ ರಿಸರ್ಚ್ ಸೆಂಟರ್ನ ಸಮೀಕ್ಷೆ ತಿಳಿಸಿದೆ.
ಪೀವ್ ರಿಸರ್ಚ್ ಸೆಂಟರ್ ಭಾರತ ಸೇರಿದಂತೆ 15 ರಾಷ್ಟ್ರಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರು ವಿದೇಶಿ ಕಂಪೆನಿಗಳು ತಮ್ಮ ದೇಶದಲ್ಲಿ ಕಾರ್ಖಾನೆ ನಿರ್ಮಿಸುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ವಿದೇಶಿ ಕಂಪೆನಿಗಳು ದೇಶಿ ಕಂಪೆನಿಗಳನ್ನು ಖರೀದಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಅಸ್ಸಾಮಿ, ಬೆಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ತಮಿಳು, ತೆಲುಗು ಭಾಷೆ ಮಾತನಾಡುವವ ರೊಂದಿಗೆ ಮುಖಾಮುಖಿ ಸಂದರ್ಶನ ನಡೆಸಿದೆ. ಭಾರತದಲ್ಲಿ ಕಳೆದ ವರ್ಷ ಜೂನ್ 24ರಿಂದ ಅಕ್ಟೋಬರ್ 2ರ ವರೆಗೆ 2,400 ಮಂದಿಯ ಸಂದರ್ಶನವನ್ನು ಪೀವ್ ರಿಸರ್ಚ್ ಸೆಂಟರ್ ನಡೆಸಿತ್ತು. ಭಾರತ ಅಲ್ಲದೆ, ನೈಜೀರಿಯಾ, ಟುನಿಶಿಯಾ, ದಕ್ಷಿಣ ಕೊರಿಯಾ, ಕೆನ್ಯಾ, ಲೆಬೆನಾನ್, ಬ್ರೆಝಿಲ್, ಅರ್ಜೆಂಟೈನಾ, ಜಪಾನ್, ಇಸ್ರೇಲ್, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಟರ್ಕಿ, ಫಿಲಿಪ್ಪೈನ್ ಹಾಗೂ ಇಂಡೋನೇಶ್ಯಾದಲ್ಲಿ ಕೂಡ ಅದು ಸಂದರ್ಶನ ನಡೆಸಿತ್ತು. ಈ ಅಧ್ಯಯನಕ್ಕಾಗಿ 2019 ಮೇ 18ರಿಂದ ಅಕ್ಟೋಬರ್ 2ರ ವರೆಗೆ 15 ರಾಷ್ಟ್ರಗಳ ಲ್ಲಿ 18,451 ಮಂದಿಯನ್ನು ಸಂದರ್ಶಿಸಲಾಗಿತ್ತು. 15ರಲ್ಲಿ 13 ರಾಷ್ಟ್ರಗಳಲ್ಲಿ ಜನರನ್ನು ಮುಖಾಮುಖಿಯಾಗಿ ಸಂದರ್ಶಿಸಲಾಯಿತು. ಉಳಿದ ಎರಡು ದೇಶಗಳಾದ ಜಪಾನ್ ಹಾಗೂ ದಕ್ಷಿಣ ಕೊರಿಯಾದ ಜನರನ್ನು ಟೆಲಿಪೋನ್ ಮೂಲಕ ಸಂದರ್ಶಿಸಲಾಯಿತು.
ಸಂದರ್ಶನದಲ್ಲಿ ಪಾಲ್ಗೊಂಡವರಲ್ಲಿ ಶೇ. 72 ಮಂದಿ ವಿದೇಶಿ ಕಂಪೆನಿಗಳು ತಮ್ಮ ದೇಶದಲ್ಲಿ ಕಾರ್ಖಾನೆ ನಿರ್ಮಿಸುವುದು ಉತ್ತಮ ಎಂದು ಹೇಳಿದ್ದರೆ, ಶೇ. 26 ಮಂದಿ ಉತ್ತಮವಲ್ಲ ಎಂದು ಹೇಳಿದ್ದಾರೆ. ವಿದೇಶಿ ಕಂಪೆನಿಗಳು ದೇಶಿ ಕಂಪೆನಿಗಳನ್ನು ಖರೀದಿಸುವುದು ಉತ್ತಮ ಎಂದು ಶೇ. 40 ಜನರು ಹೇಳಿದ್ದರೆ, ಉತ್ತಮವಲ್ಲ ಎಂದು ಶೇ. 58 ಜನರು ಹೇಳಿದ್ದಾರೆ. ವಿದೇಶಿ ಕಂಪೆನಿಗಳು ತಮ್ಮ ಕಾರ್ಖಾನೆಗಳನ್ನು ಖರೀದಿಸುವುದಕ್ಕಿಂತ ತಮ್ಮ ದೇಶದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವ ಬಗ್ಗೆ ಹೆಚ್ಚಿನ ಜನರು ಒಲವು ಹೊಂದಿದ್ದಾರೆ ಎಂದು ಪೀವ್ ರಿಸರ್ಚ್ ಸೆಂಟರ್ನ ಸಮೀಕ್ಷೆ ತಿಳಿಸಿದೆ.







