ಉಡುಪಿ: ಅಂಗವಿಕಲರಿಗೆ ವಿವಿಧ ಸಾಧನ ಸಲಕರಣೆ ವಿತರಣೆ

ಉಡುಪಿ, ಆ.24: ಜಿಲ್ಲೆಯಲ್ಲಿರುವ ಅಂಗವಿಕಲರ ನೋವಿಗೆ ಅತ್ಯಂತ ಸಕ್ರಿಯವಾಗಿ ಸ್ಪಂದಿಸುವ ಕಾರ್ಯವು ಅಂಗವಿಕಲರ ಕಲ್ಯಾಣ ಇಲಾಖೆಯ ವತಿ ಯಿಂದ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಸೋಮವಾರ ಅಜ್ಜರಕಾಡಿನಲ್ಲಿರುವ ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಮಂಗಳೂರಿನ ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಿಂದ ಬೆಂಗಳೂರಿನ ಅಲಿಮ್ಕೋ ಎಸಿಸಿ ಇವರ ಮುಖಾಂತರ ಹಾಗೂ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಅಂಗವಿಕಲರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಇವರ ಸಹಯೋಗದೊಂದಿಗೆ ನಡೆದ ಉಡುಪಿ ಜಿಲ್ಲಾ ವ್ಯಾಪ್ತಿಯ ಅಂಗವಿಕಲರಿಗೆ ದೈನಂದಿನ ಚಟುವಟಿಕೆಗಳಿಗೆ ಪೂರಕವಾದ ಸಾಧನ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.
ಶ್ರವಣ ಸಾಧನ, ಕೃತಕ ಕಾಲು, ಕ್ಯಾಲಿಪರ್, ಮೊಣಕೈ ಊರುಗೋಲು, ಕಂಕುಳ ದೊಣ್ಣೆ, ರೋಲೆಟರ್, ಊರುಗೋಲು, ಗಾಲಿ ಕುರ್ಚಿ, ಸಿಪಿ ಗಾಲಿ ಕುರ್ಚಿ, ತ್ರಿಚಕ್ರ ಸೈಕಲ್, ಬ್ರೈಲ್‌ಕಿಟ್, ಸ್ಮಾರ್ಟ್ ಕೇನ್, ಸೆಲ್‌ಫೋನ್, ಸ್ಮಾರ್ಟ್ ಫೋನ್‌ಗಳನ್ನು ಸಾಂಕೇತಿಕವಾಗಿ ದಿನಕರಬಾಬು ಫಲಾನುಭವಿಗಳಿಗೆ ವಿತರಿಸಿದರು.
ಎಂಆರ್‌ಪಿಎಲ್‌ನ ಜಿಎಂ ಸುಬ್ರಾಯ ಭಟ್ ಮಾತಾಡಿ, ಕೃತಕ ಅಂಗಾಂಗ ಗಳನ್ನು 2500 ಮಂದಿಗೆ ನೀಡುವಂತೆ ಅಲಿಮ್ಕೋಕ್ಕೆ ಬೇಡಿಕೆ ಬಂದಿದ್ದು, ಇದರಲ್ಲಿ 4 ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಯಾದಗಿರಿ ಮತ್ತು ರಾಯಚೂರಿನ ಅಂಗಕಲರಿಗೆ ಸಾಧನಗಳನ್ನು ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಉಡುಪಿ ಜಿಲ್ಲೆಯ ಒಟ್ಟು 512 ಫಲಾನುಭವಿಗಳು, ದಕ್ಷಿಣಕನ್ನಡ ಜಿಲ್ಲೆಯ 549, ರಾಯಚೂರಿನ 990 ಹಾಗೂ ಯಾದಗಿರಿಯ 506 ಫಲಾನುಭವಿಗಳಿಗೆ ಸಲಕರಣೆಗಳನ್ನು ನೀಡಲು 2.50 ಕೋಟಿ ರೂ.ಗಳಷ್ಟು ಅನುದಾನವನ್ನು ನೀಡಲಾಗಿದೆ ಎಂದರು.
ಈಗಾಗಲೇ ಉಡುಪಿ- ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಲಕರಣೆಗಳನ್ನು ನೀಡುವ ಸಿದ್ಧತೆ ಮಾಡಲಾಗಿದ್ದು ಉಳಿದೆರಡು ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಅಂಗವಿಕಲರಿಗೆ ಸಾಧನ-ಸಲಕರಣೆಗಳ್ನು ವಿತರಿಸ ಲಾಗುವುದು ಎಂದರು.
ಜಿಲ್ಲೆಯ ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರನಾಯ್ಕಾ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗವಿಕಲತೆ ಒಂದು ಶಾಪವಲ್ಲ. ವಿಕಲತೆಯನ್ನು ಎದುರಿಸಿ ಜೀವನವನ್ನು ತನ್ನದೇ ಆದ ರೀತಿಯಲ್ಲಿ ರೂಢಿಸಿಕೊಂಡಾಗ ಅಂಗವಿಕಲರು ಸಹ ಸಾಮಾನ್ಯರಂತೆ ಬದುಕಬಹುದು ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಅಲಿಮ್ಕೋ ಅಧಿಕಾರಿ ರವಿಶಂಕರ್, ಎಂಆರ್‌ಪಿಎಲ್‌ನ ಅಧಿಕಾರಿ ಬಾಲಸುಬ್ರಮಣ್ಯಂ, ಉಡುಪಿ ತಾಪಂ ಸದಸ್ಯ ಸುಭಾಶ್ ನಾಯ್ಡು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಚಂದ್ರ ನಾಯ್ಕಿ ಸ್ವಾಗತಿಸಿ, ಮಧುಸೂದನ್ ನಿರ್ವಹಿಸಿದರು.









