ಸರಕಾರಿ ಉದ್ಯೋಗ ವೆಬ್‌ಸೈಟ್‌ನಲ್ಲಿ 40 ದಿನಗಳಲ್ಲಿ 69 ಲಕ್ಷ ನೋಂದಣಿ; 7,700 ಜನರಿಗೆ ಉದ್ಯೋಗ

ಹೊಸದಿಲ್ಲಿ, ಆ.24: ಕೇಂದ್ರ ಸರಕಾರ ಜುಲೈ 11ರಂದು ಪ್ರಾರಂಭಿಸಿದ ಆತ್ಮನಿರ್ಭರ ಸ್ಕಿಲ್ಡ್ ಎಂಪ್ಲಾಯೀ ಎಂಪ್ಲಾಯರ್ ಮ್ಯಾಪಿಂಗ್(ಅಸೀಮ್) ಪೋರ್ಟಲ್‌ನಲ್ಲಿ 40 ದಿನದಲ್ಲಿ 69 ಲಕ್ಷ ಜನತೆ ಹೆಸರು ನೋಂದಾಯಿಸಿದ್ದು, ಇದರಲ್ಲಿ ಕೇವಲ 7,700 ಜರು ಮಾತ್ರ ಕೆಲಸಕ್ಕೆ ಸೇರಿದ್ದಾರೆ ಎಂದು ವರದಿಯಾಗಿದೆ.
ಸುಮಾರು 69 ಲಕ್ಷ ವಲಸೆ ಕಾರ್ಮಿಕರು ವೆಬ್ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದ್ದು ಇವರಲ್ಲಿ 1.49 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸಿದ್ದರೂ ಕೇವಲ 7700 ಜನ ಮಾತ್ರ ಕೆಲಸಕ್ಕೆ ಸೇರಿದ್ದಾರೆ. ಈ ಪೋರ್ಟಲ್ ಮೂಲಕ ವಲಸೆ ಕಾರ್ಮಿಕರು ಮಾತ್ರವಲ್ಲ, ದರ್ಜಿಗಳು, ಇಲೆಕ್ಟ್ರೀಷಿಯನ್ಸ್, ತಂತ್ರಜ್ಞರು, ಹೊಲಿಗೆ ಯಂತ್ರ ನಿರ್ವಾಹಕರು, ಕೊರಿಯರ್ ಡೆಲಿವರಿ ಮಾಡುವವರು, ನರ್ಸ್‌ಗಳು, ಲೆಕ್ಕಪತ್ರ ನಿರ್ವಾಹಕರು, ಸ್ವಚ್ಛತಾ ಕಾರ್ಮಿಕರು ಹಾಗೂ ಮಾರಾಟ ಸಹಾಯಕರೂ ನೋಂದಣಿ ಮಾಡಿಕೊಳ್ಳಬಹುದು ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ತಿಳಿಸಿದೆ.
ಬೃಹತ್ ಪ್ರಮಾಣದಲ್ಲಿ ವಲಸೆ ಕಾರ್ಮಿಕರ ಸಾಮೂಹಿಕ ವಲಸೆಗೆ ಸಾಕ್ಷಿಯಾಗಿದ್ದ ಕರ್ನಾಟಕ, ದಿಲ್ಲಿ, ಹರ್ಯಾಣ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಕಾರ್ಮಿಕರ ಕೊರತೆಯಿದೆ ಎಂದು ಇಲಾಖೆಯ ಅಂಕಿಅಂಶ ತಿಳಿಸಿದೆ. ಆಗಸ್ಟ್ 14ರಿಂದ 21ರವರೆಗಿನ ಒಂದು ವಾರದಲ್ಲಿ ವಲಸೆ ಕಾರ್ಮಿಕರಲ್ಲಿ ಕೆಲಸದ ಬೇಡಿಕೆಯ ಪ್ರಮಾಣ 80% ಹೆಚ್ಚಿದ್ದರೆ, ಉದ್ಯೋಗಾವಕಾಶದಲ್ಲಿ ಕೇವಲ 9.87% ಮಾತ್ರ ಏರಿಕೆಯಾಗಿದೆ.
ಭಾರತದ ಅಭಿವೃದ್ಧಿ ಯಾತ್ರೆಯ ವೇಗವರ್ಧಿಸುವಲ್ಲಿ ನಮ್ಮ ನಿಪುಣ ಯುವಜನತೆ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಪ್ರಧಾನಿ ಮೋದಿಯವರ ಸ್ವಾವಲಂಬಿ ಮತ್ತು ಕೌಶಲ್ಯ ಭಾರತ ಯೋಜನೆಗೆ ವೇಗ ನೀಡಲು, ದೇಶದ ಯುವಜನತೆಯನ್ನು ನೂತನ ಉದ್ಯೋಗಾವಕಾಶದ ಜೊತೆಗೆ ಜೋಡಿಸಲು ಈ ವೆಬ್‌ಪೋರ್ಟಲ್ ಪೂರಕವಾಗಿದೆ ಎಂದು ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖಾ ಸಚಿವ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ.
ಪೋರ್ಟಲ್‌ನಲ್ಲಿರುವ 73.4% ಉದ್ಯೋಗಗಳು ಆರೋಗ್ಯ ಕ್ಷೇತ್ರ, ಸಹಾಯ-ಸಹಕಾರ ಕ್ಷೇತ್ರ, ಬ್ಯಾಂಕಿಂಗ್, ಆರ್ಥಿಕ ಸೇವೆ ಮತ್ತು ವಿಮೆ ಕ್ಷೇತ್ರ, ರಿಟೈಲ್ ಕ್ಷೇತ್ರ ಹಾಗೂ ನಿರ್ಮಾಣ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿದೆ. ಜೂನ್ ತಿಂಗಳಿನಲ್ಲಿ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನದಡಿ ಪ್ರಧಾನಿ ಮೋದಿ 116 ಜಿಲ್ಲೆಗಳಲ್ಲಿ ಆರಂಭಿಸಿದ್ದ ಅಸೀಮ್ ಪೋರ್ಟಲ್‌ನಲ್ಲಿ ಉದ್ಯೋಗ ಅರಸುವವರಲ್ಲಿ ಮಹಿಳೆಯರ ಸಂಖ್ಯೆ ಕೇವಲ 5.4% ಮಾತ್ರ ಎಂದು ಅಂಕಿಅಂಶ ತಿಳಿಸಿದೆ.
ಈ ಪೋರ್ಟಲ್‌ನಲ್ಲಿ 514 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಇದರಲ್ಲಿ 443 ಸಂಸ್ಥೆಗಳು 2.92 ಲಕ್ಷ ಉದ್ಯೋಗಾವಕಾಶದ ಮಾಹಿತಿ ನೀಡಿದೆ. ಇದರಲ್ಲಿ 1.49 ಲಕ್ಷ ಉದ್ಯೋಗಾವಕಾಶಗಳನ್ನು ಆಕಾಂಕ್ಷಿಗಳಿಗೆ ಒದಗಿಸಲಾಗಿದೆ. ಪೋರ್ಟಲ್‌ನಲ್ಲಿ ನೀಡಲಾಗಿರುವ ಒಟ್ಟು ಉದ್ಯೋಗಾವಕಾಶಗಳಲ್ಲಿ 77%ಕ್ಕೂ ಹೆಚ್ಚಿನ ಉದ್ಯೋಗಾವಕಾಶ ಕರ್ನಾಟಕ, ದಿಲ್ಲಿ, ಹರ್ಯಾಣ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿವೆ ಎಂದು ಇಲಾಖೆ ತಿಳಿಸಿದೆ.







