ಬೆಳಗಾವಿ: ಲಾಕ್‍ಡೌನ್ ಅವಧಿಯಲ್ಲಿ 66 ಬಾಲ್ಯ ವಿವಾಹಕ್ಕೆ ತಡೆ
ಬೆಳಗಾವಿ, ಆ.24: ಬೆಳಗಾವಿ ಜಿಲ್ಲೆಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ 66 ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ರಾಯಬಾಗ, ಸವದತ್ತಿ, ಖಾನಾಪುರ ತಾಲೂಕುಗಳಲ್ಲಿ 66 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಇದರ ಮಧ್ಯೆಯೇ 5 ಮದುವೆಗಳು ನಡೆದು ಹೋಗಿವೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ 90ಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು ತಡೆಯಲಾಗಿತ್ತು. ಆ ವೇಳೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಂದರೆ ಬಾಲ್ಯ ವಿವಾಹಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೋನ ಲಾಕ್‍ಡೌನ್ ಸಂದರ್ಭ ಬಳಸಿಕೊಂಡು ಬಾಲ್ಯವಿವಾಹ ಮಾಡಬಹುದು ಎಂದು ಹೆಚ್ಚಿನ ನಿಗಾ ವಹಿಸಿದ್ದೆವು. ಹೀಗಾಗಿ, ಹೆಚ್ಚಿನ ಪ್ರಕರಣಗಳನ್ನು ತಡೆದಿದ್ದೇವೆ. ಕಣ್ಣು ತಪ್ಪಿಸಿ ನಡೆದ 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಬಾಲಕಿಯರನ್ನು ರಕ್ಷಿಸಿದ್ದೇವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳು ಪೋಷಕರ ಜೊತೆಯಲ್ಲಿ ಇರುವುದಕ್ಕೆ ಒಪ್ಪದಿದ್ದಲ್ಲಿ ಬಾಲಕಿಯರ ಬಾಲಮಂದಿರದಲ್ಲಿ ಇರಿಸಿ ಅವರನ್ನು ಪೋಷಿಸಲಾಗುತ್ತದೆ. 18 ವರ್ಷ ತುಂಬಿದ ಬಳಿಕ ಪೋಷಕರ ಬಳಿಗೆ ಕಳುಹಿಸುತ್ತೇವೆ. ಬಾಲಮಂದಿರದಲ್ಲಿ ಮಕ್ಕಳ ಆರೋಗ್ಯದತ್ತ ಕಾಳಜಿ ವಹಿಸಲಾಗುತ್ತದೆ. ಅಲ್ಲಿ ಅವರಿಗೆ ಕೊರೋನ ಸೋಂಕು ತಗುಲದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.







