ಕೋವಿಡ್-19 ಸುರಕ್ಷಾ ವಿಮಾ ಕಾರ್ಯಕ್ರಮಕ್ಕೆ ಎಜಿ ಪ್ರಭುಲಿಂಗ ನಾವದಗಿ ಚಾಲನೆ
ಬೆಂಗಳೂರು, ಆ.24: ರಾಜ್ಯದ ವಕೀಲರ ಪರಿಷತ್ತಿನಿಂದ ವಕೀಲ ಸಮುದಾಯಕ್ಕೆ ಜಾರಿಗೊಳಿಸಿರುವ ಕೋವಿಡ್-19 ಸುರಕ್ಷಾ ವಿಮಾ ಕಾರ್ಯಕ್ರಮಕ್ಕೆ ರಾಜ್ಯದ ಅಡ್ವೋಕೆಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಸೋಮವಾರ ಕರ್ನಾಟಕ ವಕೀಲರ ಪರಿಷತ್ತು ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಸುರಕ್ಷಾ ವಿಮಾ ಯೋಜನೆಯನ್ನು ಶುಭಾರಂಭ ಮಾಡಿ ಮಾತನಾಡಿದ ಪ್ರಭುಲಿಂಗ ಕೆ. ನಾವದಗಿ, ಕೊರೋನ ಸಂಕಷ್ಟ ವಿಶೇಷ ಸಂದರ್ಭದಲ್ಲಿ ಎದುರಾಗಿದೆ. ಇದನ್ನು ಯಾರೂ ಊಹಿಸಿರಲ್ಲ. ಕಷ್ಟದಲ್ಲಿ ವಕೀಲರ ನೆರವಿಗೆ ವಕೀಲರ ಪರಿಷತ್ತು ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ ಕೆಲಸವಾಗಿದೆ. ಆರ್ಥಿಕ ನೆರವಿನ ಜತೆಗೆ ವಿಮಾ ಸೌಲಭ್ಯ ಕಲ್ಪಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ವಕೀಲರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲಿದೆ ಎಂದರು.
ಕೋವಿಡ್-19ನಿಂದಾಗಿ ಇದೀಗ ಎಲ್ಲೆಡೆ ವರ್ಚುವಲ್ ಕೋರ್ಟ್ ಕಲಾಪಗಳು ನಡೆಯುತ್ತಿವೆ. ಆದರೆ ಭೌತಿಕ ಕಲಾಪಕ್ಕೆ ವರ್ಚುವಲ್ ಕಲಾಪ ಪರ್ಯಾಯವಲ್ಲ. ಹೀಗಾಗಿ ಆದಷ್ಟು ಬೇಗ ನ್ಯಾಯಾಲಯದ ದೈನಂದಿನ ಕಲಾಪಗಳು ಆರಂಭವಾಗುವ ನಿರೀಕ್ಷೆ ಇದೆ. ಜತೆಗೆ ಸರಕಾರ ವಕೀಲರ ಬೇಡಿಕೆಗಳಿಗೆ ಸ್ಪಂದಿಸಲಿದೆ. ವಕೀಲರ ಪರಿಷತ್ತಿಗೆ ಶಾಶ್ವತ ಕಟ್ಟಡ ದೊರೆಕಿಸಿಕೊಡಲು ತಾವು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಜೆ.ಎಂ.ಅನಿಲ್ ಕುಮಾರ್ ಮಾತನಾಡಿ, ಕೋವಿಡ್-19 ವಿಮಾ ಸುರಕ್ಷಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವ ಅವಧಿಯನ್ನು ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗುವುದು. ಇದೀಗ ವಿಮಾ ಸೌಲಭ್ಯ ಪಡೆಯಲು 14 ಸಾವಿರ ಅರ್ಜಿಗಳು ಬಂದಿವೆ. ಮತ್ತಷ್ಟು ವಕೀಲರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದರು.
ಕೊರೋನದಿಂದ ಯಾವುದೇ ವಕೀಲರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ವಕೀಲರ ಪರಿಷತ್ತು ನಿಮ್ಮೆಲ್ಲರ ನೆರವಿಗೆ ನಿಂತು ಸಂಕಷ್ಟಕ್ಕೆ ಸ್ಪಂದಿಸಲಿದೆ. ರಾಜ್ಯ ಸರಕಾರ ವಕೀಲರ ಕಷ್ಟವನ್ನು ಪರಿಗಣಿಸಿ ಐದು ಕೋಟಿ ರೂ. ಆರ್ಥಿಕ ನೆರವು ನೀಡಿದೆ. ಸೋಂಕಿಗೆ ಒಳಗಾದವರಿಗೆ ಆತಸ್ಥೈರ್ಯ ತುಂಬಲು 50 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ವೈ.ಆರ್.ಸದಾಶಿವ ರೆಡ್ಡಿ ಮಾತನಾಡಿ, ಕೊರೋನ ಸೋಂಕಿನ ಸಂದರ್ಭದಲ್ಲಿ ಅಖಿಲ ಭಾರತೀಯ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತು ವಕೀಲರ ಸಂಕಷ್ಟಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ಸಂಕಷ್ಟದಲ್ಲಿರುವ ಸಮುದಾಯಕ್ಕೆ ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ವಕೀಲರ ಪರಿಷತ್ತಿನ ವಿಮಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕಿವಾಡ್ ಕಮಲೇಶ್ವರ್ ತುಕಾರಾಂ ವಿಮಾ ಕಾರ್ಯಕ್ರಮದ ಸ್ವರೂಪದ ಬಗ್ಗೆ ಬೆಳಕು ಚೆಲ್ಲಿದರು. ವಿಮಾ ಸಮಿತಿ ಸದಸ್ಯ ಎಂ. ದೇವರಾಜ್ ಹಾಜರಿದ್ದರು.







