ಬೆಳಗಾವಿಯಿಂದ ಅಯೋಧ್ಯೆಗೆ ರೈಲು ವ್ಯವಸ್ಥೆಗೆ ಕ್ರಮ: ಕೇಂದ್ರ ಸಚಿವ ಸುರೇಶ್ ಅಂಗಡಿ

ಬೆಳಗಾವಿ, ಆ.24: ಶ್ರೀರಾಮನ ದರ್ಶನಕ್ಕೆ ಅನುಕೂಲವಾಗುವಂತೆ ಮುಂಬರುವ ದಿನಗಳಲ್ಲಿ ಬೆಳಗಾವಿಯಿಂದ ಅಯೋಧ್ಯೆಗೆ ರೈಲು ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಭರವಸೆ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ರಾಮದೇವ್ ಗಲ್ಲಿಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಶ್ರೀರಾಮನ ದರ್ಶನಕ್ಕಾಗಿ ಅನುಕೂಲವಾಗುವಂತೆ ಬೆಳಗಾವಿಯಿಂದ ಅಯೋಧ್ಯೆಗೆ ಒಂದು ರೈಲು ವ್ಯವಸ್ಥೆ ಕಲ್ಪಿಸಲು ಇಲ್ಲಿನ ದೇವಸ್ಥಾನ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರು ಮನವಿ ಮಾಡಿದ್ದಾರೆ ಎಂದರು.
ಹೀಗಾಗಿ, ಕೋಟ್ಯಂತರ ಹಿಂದೂಗಳ ಆರಾಧ್ಯದೈವ ಶ್ರೀರಾಮನ ದರ್ಶನಕ್ಕೆ ಹೋಗುವ ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ಭಾಗದ ಜನರಿಗೆ ಅನುಕೂಲವಾಗುವಂತೆ ರೈಲು ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಬಿಜೆಪಿ ಮಂಡಳಿಯ ಅಧ್ಯಕ್ಷ ಧನಂಜಯ ಜಾಧವ್, ಮಾಜಿ ಮಹಾಪೌರ ಶಿವಾಜಿ ಸುಂಡಕರ್, ಅಶೋಕ್, ರಾಜಶೇಖರ್ ಹಂಡೆ ಉಪಸ್ಥಿತರಿದ್ದರು.





