ಬೆಂಗಳೂರು ನಗರದಲ್ಲಿ 1,918 ಮಂದಿಗೆ ಕೊರೋನ ದೃಢ; 26 ಮಂದಿ ಸಾವು

ಬೆಂಗಳೂರು, ಆ.24: ನಗರದಲ್ಲಿ ಸೋಮವಾರ ಒಂದೆ ದಿನ 1,918 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 26 ಜನರು ಮೃತರಾಗಿದ್ದಾರೆ.
ನಗರದಲ್ಲಿ ಒಟ್ಟು 1,09,793 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,694 ಜನರು ಸೋಂಕಿಗೆ ಬಲಿಯಾಗಿದ್ದಾರೆ. 73,363 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಸೋಮವಾರ 2,034 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 34,735 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 1,43,973 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ರವಿವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 15,229 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 38,123 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.
ಸಿಎಂ ಗೃಹ ಕಚೇರಿ ಕೃಷ್ಣಾ ಪುನರ್ ಆರಂಭ
ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಸೇರಿದಂತೆ ಅನೇಕ ನೌಕರರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಆ.25ರಂದು ಸಿಎಂ ಗೃಹ ಕಚೇರಿ ಕೃಷ್ಣಾ ಸೀಲ್‍ಡೌನ್ ಆಗಿತ್ತು. ಇದೀಗ ಮೂರು ವಾರದ ಬಳಿಕ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರದಿಂದ ಚಟುವಟಿಕೆಗಳು ಪುನರಾರಂಭಗೊಂಡಿವೆ.
ಪಾಸಿಟಿವ್ ಇಲ್ಲದಿದ್ದರೂ ಚಿಕಿತ್ಸೆ; ಆರೋಪ
ಸಾರ್ವಜನಿಕರಿಗೆ ಕೊರೋನ ಪಾಸಿಟಿವ್ ಇಲ್ಲದಿದ್ದರೂ ಕೋವಿಡ್ ಸೆಂಟರ್ ಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಜ್ವರ ಚಿಕಿತ್ಸಾಲಯಗಳಿಗೆ ತೆರಳಿ ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ಪಡೆಯಲು ಹೋದರೆ ಕೊರೋನ ಸೋಂಕು ದೃಢಪಡದಿದ್ದರೂ ನಮ್ಮನ್ನು ಬಲವಂತವಾಗಿ ಕೋವಿಡ್ ಸೆಂಟರ್ ಅಥವಾ ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜ್‍ನಲ್ಲಿ ಸುಮ್ಮನೆ ಕೂಡಿಹಾಕಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ.
ಅಧಿಕಾರಿಗಳು ದುಡ್ಡು ಹೊಡೆಯಲು ನಮ್ಮನ್ನ ತೋರಿಸುತ್ತಿದ್ದಾರೆ. ನಮಗೆ ಪಾಸಿಟಿವ್ ಇದೆಯಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ಕೇಳಿದರೆ ವರದಿ ಸಹ ಕೊಡುತ್ತಿಲ್ಲ ಎಂದು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆರೋಪಿಸಿದ್ದಾರೆ.







