ಸಿಇಟಿ-2020: ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡಲು ವೇಳಾಪಟ್ಟಿ ಪ್ರಕಟ
ಬೆಂಗಳೂರು, ಆ.24: 2020ನೆ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸೀಟು ಹಂಚಿಕೆಯ ಅರ್ಹ ಅಭ್ಯರ್ಥಿಗಳು ಅಪ್‍ಲೋಡ್ ಮಾಡುವ ದಾಖಲಾತಿಗಳು, ಪ್ರಮಾಣ ಪತ್ರಗಳನ್ನು ಅವಲಂಬಿಸಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಸಹಾಯಕ ಕೇಂದ್ರಗಳಿಗೆ ಖುದ್ದಾಗಿ ಹಾಜರಾಗಲು ಅಭ್ಯರ್ಥಿಗಳು ಮತ್ತು ಪೋಷಕರಿಗೆ ಅನಾನುಕೂಲವುಂಟಾಗುತ್ತದೆ. ಈ ಕಾರಣಗಳಿಂದಾಗಿ ಸರಕಾರವು ದಾಖಲಾತಿ ಪರಿಶೀಲನೆಯನ್ನು ಆನ್‍ಲೈನ್ ಮೂಲಕ ನಡೆಸಲು ನಿರ್ಧರಿಸಿದೆ.
ಅರ್ಹ ಅಭ್ಯರ್ಥಿಗಳು, ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಅರ್ಹತೆ ಪಡೆಯಲು, ನಿಗದಿಪಡಿಸಿರುವ ವೇಳಾಪಟ್ಟಿಗೆ ಅನುಸಾರವಾಗಿ ಅವರ ಅರ್ಹತೆಗೆ ಅನುಗುಣವಾಗಿ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ರಾಜ್ಯ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟಿನಲ್ಲಿ ನಿಗದಿತ ಲಿಂಕ್ ಅನ್ನು ಸೆಲೆಕ್ಟ್ ಮಾಡಿ ಪ್ರತಿಯೊಂದು ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕಾಗುತ್ತದೆ.
ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗಾಗಿ ಯಾವುದೇ ಸಹಾಯಕ ಕೇಂದ್ರಗಳಿಗೆ ಬರುವಂತಹ ಅಗತ್ಯತೆ ಇರುವುದಿಲ್ಲ. ದಾಖಲೆಗಳನ್ನು ಅಪ್‍ಲೋಡ್ ಮಾಡುವ ವಿಧಾನವನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಸದ್ಯದಲ್ಲಿಯೆ ಪ್ರಕಟಿಸಲಾಗುವುದು. ಆಯಾ ರ‍್ಯಾಂಕುಗಳಿಗೆ ನಿಗದಿಪಡಿಸಿರುವ ದಿನಾಂಕಗಳಲ್ಲಿ ಮಾತ್ರ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಅಪ್‍ಲೋಡ್ ಮಾಡಲು ಸೂಚಿಸಿದೆ.
ಸೆ.2 ಹಾಗೂ 3ರಂದು ರ‍್ಯಾಂಕ್ 1 ರಿಂದ 2000, ಸೆ.4 ರಿಂದ 6ರವರೆಗೆ 2001ನೆ ರ‍್ಯಾಂಕಿನಿಂದ 7000, ಸೆ.7 ರಿಂದ 9ರವರೆಗೆ 7001ನೆ ರ‍್ಯಾಂಕಿನಿಂದ 15000, ಸೆ.10 ರಿಂದ 12ರವರೆಗೆ 15001ನೆ ರ‍್ಯಾಂಕಿನಿಂದ 25000, ಸೆ.13 ರಿಂದ 15ರವರೆಗೆ 25001ನೆ ರ‍್ಯಾಂಕಿನಿಂದ 40000, ಸೆ.16ರಿಂದ 19ರವರೆಗೆ 40001ನೆ ರ‍್ಯಾಂಕಿನಿಂದ 70000, ಸೆ.20 ರಿಂದ 23ರವರೆಗೆ 70001ನೆ ರ‍್ಯಾಂಕಿನಿಂದ 100000, ಸೆ.24ರಿಂದ 27ರವರೆಗೆ 100001 ರಿಂದ ಕೊನೆಯ ರ‍್ಯಾಂಕ್‍ವರೆಗಿನ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು.
ಅಭ್ಯರ್ಥಿಗಳು ಸಿದ್ಧವಿಟ್ಟುಕೊಳ್ಳಬೇಕಾದ ದಾಖಲೆಗಳ ವಿವರಗಳನ್ನು, ಪ್ರಮಾಣಪತ್ರಗಳ ನಮೂನೆಗಳನ್ನು ಹಾಗೂ ಸೂಚನೆಗಳನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.







