ಫಿಲಿಪ್ಪೀನ್ಸ್‌ನಲ್ಲಿ ಅವಳಿ ಸ್ಫೋಟ: 10 ಸಾವು

ಜೋಲೊ (ಫಿಲಿಪ್ಪೀನ್ಸ್), ಆ. 24: ದಕ್ಷಿಣ ಫಿಲಿಪ್ಪೀನ್ಸ್‌ನ ದ್ವೀಪವೊಂದರಲ್ಲಿ ಸೋಮವಾರ ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ ಅವಳಿ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸುಲು ದ್ವೀಪದ ಜೋಲೊ ಎಂಬಲ್ಲಿ ಈ ದಾಳಿ ನಡೆದಿದೆ. ಈ ದ್ವೀಪವು ಭಯೋತ್ಪಾದಕರ ಭದ್ರಕೋಟೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊದಲ ಸ್ಫೋಟದಲ್ಲಿ ಐವರು ಸೈನಿಕರು ಮತ್ತು ನಾಲ್ವರು ನಾಗರಿಕರು ಮೃತಪಟ್ಟರು ಎಂದು ಲೆಫ್ಟಿನೆಂಟ್ ಜನರಲ್ ಕಾರ್ಲೆಟೊ ವಿನ್ಲುವನ್ ಸುದ್ದಿಗಾರರಿಗೆ ತಿಳಿಸಿದರು. ಸೂಪರ್‌ಮಾರ್ಕೆಟ್ ಒಂದರ ಹೊರಗೆ ನಿಲ್ಲಿಸಲಾಗಿದ್ದ ಮೋಟರ್‌ಸೈಕಲೊಂದರಲ್ಲಿ ಇಡಲಾಗಿದ್ದ ಸ್ಫೋಟಕವು ಸಿಡಿದಾಗ ಈ ಸ್ಫೋಟ ಸಂಭವಿಸಿತು.
ಈ ಸ್ಫೋಟದಲ್ಲಿ 16 ಸೈನಿಕರು ಮತ್ತು 20 ನಾಗರಿಕರು ಗಾಯಗೊಂಡರು.
ಸ್ವಲ್ಪ ಸಮಯದ ಬಳಿಕ ಅದೇ ರಸ್ತೆಯಲ್ಲಿ ಇನ್ನೊಂದು ಸ್ಫೋಟ ಸಂಭವಿಸಿತು. ಈ ರಸ್ತೆಯನ್ನು ಪೊಲೀಸರು ಮುಚ್ಚುತ್ತಿದ್ದಾಗ ಓರ್ವ ಮಹಿಳಾ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಳು. ಈ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಆರು ಪೊಲೀಸರು ಗಾಯಗೊಂಡಿದ್ದಾರೆ.





